ಶ್ರೀ ಮೃತ್ಯುಂಜಯಪ್ಪಗಳ ವರ್ಧಂತಿ ಉತ್ಸವ

26 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶ್ರೀ ಮೃತ್ಯುಂಜಯಪ್ಪಗಳ 138ನೇ ವರ್ಧಂತಿ ಉತ್ಸವ ನಗರದ ಮುರುಘಾಮಠದಲ್ಲಿ ಶನಿವಾರ ಜರುಗಿತು. ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಶ್ರೀಗಳ ಭಾವಚಿತ್ರ ಹಾಗೂ ಗ್ರಂಥಗಳನ್ನು ಪಲ್ಲಕ್ಕಿಯಲ್ಲಿರಿಸಿ ಸವದತ್ತಿ ರಸ್ತೆ ಮಾರ್ಗವಾಗಿ ಸಂಚರಿಸಿ ಹಾವೇರಿಪೇಟ ಮುಖ್ಯ ವೃತ್ತ ತಲುಪಿ ಮಠಕ್ಕೆ ಆಗಮಿಸಿತು.

ಮುರುಘಾಮಠದ ಪೀಠಾಧ್ಯಕ್ಷ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಜಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಶ್ರೀಮದಥಣಿ ಶಿವಯೋಗಿಗಳ ಪರಮಾಶೀರ್ವಾದದೊಂದಿಗೆ ನುಡಿದಂತೆ ನಡೆದು ಬೆಳಗಿನೊಳಗಿನ ಬೆಳಗನ್ನು ಕಂಡ ಶ್ರೀ ಮೃತ್ಯುಂಜಯಪ್ಪಗಳು ಪುಣ್ಯಪುರುಷರು. ತನು, ಮನ, ಧನಗಳನ್ನು ಗುರು- ಲಿಂಗ- ಜಂಗಮಕ್ಕರ್ಪಿಸಿದ ಪರಮ ದಾಸೋಹ ಮೂರ್ತಿಗಳು. ಶ್ರೀಗಳ ದೂರದೃಷ್ಟಿಯ ಪ್ರಸಾದ ನಿಲಯದ ದಾಸೋಹ ಸೇವೆ ನಿರಂತರವಾಗಿ ಮುಂದುವರಿದಿದೆ ಎಂದರು.

ಶ್ರೀ ಬಸವಲಿಂಗ ಸ್ವಾಮೀಜಿ, ಮಠದ ಆಡಳಿತ ಮಂಡಳಿ ಪದಾಧಿಕಾರಿಗಳಾದ ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ವಿರೂಪಾಕ್ಷ ಕಟಗಿ, ಮಂಜುನಾಥ ಸಾಲಿಮಠ, ಬಿ.ಎಸ್. ಗಣಾಚಾರಿ, ಶಿವಣ್ಣ ಹೊಸೂರ, ಶಿವಯೋಗಿ ಇಂಡಿ, ಸತೀಶ ತುರಮರಿ, ಎಸ್.ಜಿ. ನಡಕಟ್ಟಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net