

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ಪೂಜೆ, ಪ್ರಾರ್ಥನೆ ಹಾಗೂ ವಚನ ಸಾಹಿತ್ಯ ಅನುಭಾವ ಉಣಬಡಿಸಿದ ಶ್ರೀ ಮೃತ್ಯುಂಜಯಪ್ಪಗಳು ಸದಾ ಸ್ಮರಣೀಯರು ಎಂದು ಜಡೆ ಸಂಸ್ಥಾನಮಠದ ಡಾ. ಮಹಾಂತ ಸ್ವಾಮಿಜಿ ಹೇಳಿದರು.
ನಗರದ ಮುರುಘಾಮಠದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಮೃತ್ಯುಂಜಯಪ್ಪಗಳ 61ನೇ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಗ, ವರ್ಣ, ಜಾತಿ, ಲಿಂಗಬೇಧ ತೊಡೆದು ಹಾಕಿದ ಬಸವಾದಿ ಶರಣರ ಆಪೇಕ್ಷೆಯಂತೆ ಮುರುಘಾಮಠದಲ್ಲಿ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಉಚಿತ ಪ್ರಸಾದ, ಶಿಕ್ಷಣ ನೀಡಲಾಗುತ್ತಿದೆ. ಮೃತ್ಯುಂಜಯಪ್ಪಗಳು ಮಾಡಿದ ಕಾರ್ಯ ಅಜರಾಮರ. ಜ್ಞಾನದ ಪ್ರಕಾಶ, ಸುಜ್ಞಾನದ ಮಾರ್ಗದರ್ಶನ ಮಾಡಿ ಗುರುಗಳಾದ ಮೃತ್ಯುಂಜಯಪ್ಪಗಳು ನಾಡಿಗೆ ಶ್ರೇಷ್ಠ ಮಠಾಧೀಶರಾದರು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಆರ್. ಎರವಿನತೆಲಿಮಠ ಮಾತನಾಡಿ, ಮೃತ್ಯುಂಜಯಪ್ಪಗಳು ಶಿಕ್ಷಣ, ಕಾಯಕ, ದಾಸೋಹ ಹಾಗೂ ಬಸವಾದಿ ಶರಣರ ಸಂದೇಶ ಸಾರುವ ಎಲ್ಲರ ಮನಸ್ಸುಗಳನ್ನು ಮಹಾಲಿಂಗವನ್ನಾಗಿಸುವಲ್ಲಿ ಶ್ರಮಿಸಿದವರು. ಡಾ. ಮಲ್ಲಿಕಾರ್ಜುನ ಸ್ವಾಮಿಜಿ ನೇತೃತ್ವದಲ್ಲಿ ಮುರುಘಾಮಠ ಅದೇ ಪರಂಪರೆಯಲ್ಲಿ ಸಾಗುತ್ತಿದೆ ಎಂದರು.
ಹೊಳೆಮಠದ ಶ್ರೀ ನಾಗಭೂಷಣ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಸವಿತಾ ಅಮರಶೆಟ್ಟಿ, ಇತರರಿದ್ದರು. ಡಾ. ವೆಂಕಟರಾಮ ಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭಕ್ಕೂ ಮುನ್ನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಶ್ರೀ ಮೃತ್ಯುಂಜಯಪ್ಪಗಳವರ ಭಾವಚಿತ್ರ ಪಲ್ಲಕ್ಕಿ ಉತ್ಸವ ಜರುಗಿತು. ಭಜನಾ ತಂಡಗಳು, ವಾದ್ಯ ಮೇಳಗಳೊಂದಿಗೆ ಮುರುಘಾಮಠದಿಂದ ಹೊರಟ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಠಕ್ಕೆ ಮರಳಿತು.