

ತಿ.ನರಸೀಪುರ: ಪಟ್ಟಣದ ಹಳೇ ಸಂತೆಮಾಳದ ಶ್ರೀ ಶಿವಕಾಮ ಸುಂದರಿ ಅಮ್ಮನವರ ಸಮೇತ ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ರಥೋತ್ಸವ ಯುಗಾದಿ ಹಬ್ಬದ ದಿನವಾದ ಮಂಗಳವಾರ ಸಂಭ್ರಮದಿಂದ ಜರುಗಿತು.
ದೇವಾಲಯದಲ್ಲಿ ಮುಂಜಾನೆ ರುದ್ರಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಉತ್ಸವಮೂರ್ತಿಗೆ ಹೂಗಳು ಹಾಗೂ ಆಭರಣಗಳಿಂದ ಶಂಗರಿಸಿ ದಳವಾಯಿ ಅಗ್ರಹಾರದ ಶ್ರೀ ರಾಮಮಂದಿರಕ್ಕೆ ತರಲಾಯಿತು. ವಿಶೇಷ ಪೂಜೆ ಸಲ್ಲಿಸಿ ಮಂಟಪೋತ್ಸವ ನಡೆಸಿದ ಬಳಿಕ ರಥ ಸಂಚರಿಸುವ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ದಳವಾಯಿ ಅಗ್ರಹಾರ ರಸ್ತೆಯ ಅಡುಗೆ ಕಂಟ್ರಾೃಕ್ಟರ್ ಮಣಿ ಅವರ ಮನೆ ಮುಂದೆ ವಿವಿಧ ಬಣ್ಣದ ಬಟ್ಟೆ ಹಾಗೂ ಬಾವುಟಗಳಿಂದ ಸಿಂಗಾರಗೊಂಡು ಸಿದ್ಧವಾಗಿದ್ದ ರಥದ ಸುತ್ತ ಶ್ರೀ ಶಿವಕಾಮ ಸುಂದರಿ ಅಮ್ಮನವರ ಸಮೇತ ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸಿ, ಮಧ್ಯಾಹ್ನ 11.30ರಲ್ಲಿ ರಥದ ಮೇಲೆ ಕೂರಿಸಲಾಯಿತು. ರಥದ ನಾಲ್ಕು ಚಕ್ರಗಳಿಗೆ ತೆಂಗಿನಕಾಯಿ ಒಡೆದು ನಮಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಮಧ್ಯಾಹ್ನ 11.40ರಲ್ಲಿ ರಥಕ್ಕೆ ಚಾಲನೆ ದೊರೆಯಿತು.
ದಳವಾಯಿ ಅಗ್ರಹಾರ, ಹಳೇ ಅಂಚೆ ಕಚೇರಿ ರಸ್ತೆ, ಹಳೇ ಪ್ರೈಮರಿ ಸ್ಕೂಲ್ ರಸ್ತೆ ಮೂಲಕ ತೇರಿನ ಬೀದಿಯಲ್ಲಿ ಕೊನೆಗೊಂಡಿತು. ಆನಂತರ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಆವರಣದ ಮೂಲಕ ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.
ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ದಣಿದಿದ್ದ ಭಕ್ತರಿಗೆ ಪಾನಕ-ಮಜ್ಜಿಗೆ, ಜ್ಯೂಸ್, ಚಾಕಲೇಟ್, ವಿತರಣೆ ಮಾಡಲಾಯಿತು.
ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆಗಮಿಕ ನೀಲಕಂಠ ದೀಕ್ಷಿತ್, ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ಎಸ್.ರಾಘವೇಂದ್ರ, ಅರ್ಚಕರಾದ ಬಿ.ಶೇಷನ್, ಆರ್.ಅರ್ಜುನ್, ಉದ್ಯಮಿ ಎನ್.ರೇಣುಕಾಪ್ರಸಾದ್(ಮಧು), ಎನ್.ಶ್ರೀಕಂಠಪ್ರಸಾದ್(ಚಂದು) ಇತರರು ಇದ್ದರು.