ಶಿಥಿಲಗೊಂಡ ವಿದ್ಯುತ್ ಕಂಬ ಬದಲಾವಣೆಗೆ ಕ್ರಮ

SRP_25-01jpj
Published on

 ಶ್ರೀರಂಗಪಟ್ಟಣ : ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳ ಬದಲಾವಣೆ, ಮತ್ತು ಪರಿವರ್ತಕಗಳ ಅಳವಡಿಕೆ ಕಾಮಗಾರಿಗೆ ( ಮಾದರಿ ಗ್ರಾಮ ಯೋಜನೆಯಡಿ 50ಲಕ್ಷ ರೂ. ವೆಚ್ಚದಲ್ಲಿ ನಿರ್ವಹಣೆ ) ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು.

ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ವಿವಿಧೆಡೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಮೂಲ ಸೌಕರ್ಯಗಳನ್ನು ಉನ್ನತಿಕರಿಸಲಾಗುವುದು. ಈಗಾಗಲೇ ಮೊದಲ ಹಂತದಲ್ಲಿ ಅರಕೆರೆ, ಕೆ.ಶೆಟ್ಟಹಳ್ಳಿ, ಪಾಲಹಳ್ಳಿ, ನೇರಳಕೆರೆ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಚಿಕ್ಕಅಂಕನಹಳ್ಳಿ ವೃತ್ತದಲ್ಲೂ ಕಾಮಗಾರಿ ನಡೆಸಲು ಚಾಲನೆ ನೀಡಲಾಗಿದೆ. ಸುರಕ್ಷಾ ಕವಚ ಸಹಿತ ಎಲ್.ಟಿ. ಕೇಬಲ್ ಹಾಗೂ ಎಬಿಸಿ ಕೇಬಲ್‌ಗಳ ಅಳವಡಿಕೆ ಮಾಡಲಾಗುತ್ತದೆ. ಈ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಸಮಯದಲ್ಲಿ ಏಕಾಏಕಿ ವಿದ್ಯುತ್ ಅಡಚಣೆ, ವಿದ್ಯುತ್ ಸ್ಪರ್ಶದಿಂದ ಉಂಟಾಗುವ ಗಂಭೀರ ಅಪಘಾತ ತಡೆ, ವೋಲ್ಟೇಜ್ ಹೆಚ್ಚಿಸಿ ರೈತಾಪಿ ಜನರ ನಿತ್ಯದ ಜೀವನಕ್ಕೆ ಅನೂಕೂಲ ವಾಗುವಂತೆ ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಮೇಲಿನ ತಂತಿ ಪ್ರಮಾಣ ಕಡಿಮೆ ಮಾಡಿ ಭೂಮಿಯೊಳಗೆ ವಿದ್ಯುತ್ ಪೂರೈಕೆ ತಂತಿ ಹಾಕುವ ಯೋಜನೆ ಜಾರಿಯಾಗಲಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ವಿವರಿಸಿದರು. ಸೆಸ್ಕ್ ಎಇಇ ಮಂಜುನಾಥ್ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಸುಗ್ಗನಹಳ್ಳಿ ಕೃಷ್ಣ, ಹುರುಳಿಕ್ಯಾತನಹಳ್ಳಿ ಶಿವಕುಮಾರ್, ದೇಸಿಲಿಂಗೇಗೌಡ ಹಾಗೂ ಅಭಿಷೇಕ್ ಮತ್ತು ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net