

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಅ.29ರಿಂದ 5 ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳು ನಡೆದಿದೆ.
ಅ.29 ರಂದು ಮಾದಪ್ಪನ ಸನ್ನಿಧಿಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆಯನ್ನು ನೆರವೇರಿಸುವುದರ ಮೂಲಕ ದೀಪಾವಳಿ ಜಾತ್ರೆ ಆರಂಭವಾಗಲಿದ್ದು, 30 ರಂದು ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿವಿಧ ಉತ್ಸವಾದಿಗಳು, 31 ರಂದು ನರಕ ಚತುರ್ದಶಿ ಪ್ರಯುಕ್ತ ವಿಶೇಷ ಉತ್ಸವಗಳು ನಡೆಯಲಿದೆ. ನ.1ರಂದು ಅಮಾವಾಸ್ಯೆಯ ಹಿನ್ನೆಲೆ 101 ಹೆಣ್ಣು ಮಕ್ಕಳಿಂದ ಹಾಲರವಿ ಉತ್ಸವವು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. 2ರಂದು ಬೆಳಗ್ಗೆ 7.50 ರಿಂದ 9 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವವು ಜರುಗಲಿದೆ. ಬಳಿಕ ಶ್ರೀಗಳ ಸಾನಿಧ್ಯದಲ್ಲಿ ದೇಗುಲದ ಸುತ್ತ ಗುರು ಬ್ರಹ್ಮೋತ್ಸವ ಹಾಗೂ ದೇಗುಲದ ಒಳಾಂಗಣದಲ್ಲಿ ಅನ್ನ ಬ್ರಹ್ಮೋತ್ಸವ ನೆರವೇರಲಿದೆ.
ಈ ಜಾತ್ರಾ ಮಹೋತ್ಸವಕ್ಕೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಈಗಾಗಲೇ ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ, ನರಸೀಪುರ, ಎಚ್.ಡಿ ಕೋಟೆ, ಮಳವಳ್ಳಿ ಹಾಗೂ ಇನ್ನಿತರ ಕಡೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದು, ತಾಳುಬೆಟ್ಟದಲ್ಲಿ ತಂಗುವುದರ ಮೂಲಕ ಮ.ಬೆಟ್ಟಕ್ಕೆ ಆಗಮಿಸಿ ಬೀಡು ಬಿಟ್ಟಿದ್ದಾರೆ. ಹಾಗಾಗಿ ಲಕ್ಷಾಂತರ ಭಕ್ತರು ಭಾಗಿಯಾಗುವ ಈ ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕೊರತೆಯಾಗದಂತೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಮುತುವರ್ಜಿ ವಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಧಿಕಾರದ ಉಪಾಧ್ಯಕ್ಷ ಕೆ. ವೆಂಕಟೇಶ್, ಶಾಸಕ ಎಂ.ಆರ್ ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀಡಿರುವ ಸಲಹೆ, ಸೂಚನೆಯ ಮೇರೆಗೆ ಜಾತ್ರೆ ಸುಸೂತ್ರವಾಗಿ ನೆರವೇರಲು ಈಗಾಗಲೇ ನೌಕರರ ಸಭೆ ನಡೆಸಿ ಜವಾಬ್ದಾರಿಗಳನ್ನು ನೀಡಿದ್ದಾರೆ. ಯಾವುದೇ ಲೋಪವಿಲ್ಲದಂತೆ ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಸೂಚಿಸಿದ್ದಾರೆ. ಜತೆಗೆ ಕೈಗೊಳ್ಳಲಾಗಿರುವ ಅಗತ್ಯ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ್ದಾರೆ.
ಪ್ರಾಧಿಕಾರದಿಂದ ಸಕಲ ಸಿದ್ಧತೆ: ಜಾತ್ರೆಗೆ ತಮಿಳುನಾಡು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ 300 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಹಾಗೂ 150 ತಮಿಳುನಾಡು ಬಸ್ ವ್ಯವಸ್ಥೆ ಮಾಡಲಾಗಿದೆ. ಕಾವೇರಿ ನೀರು ಸರಬರಾಜು ಯೋಜನೆಯಿಂದ 90 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ನೀರು ಶೇಖರಿಸಿದ್ದು, ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಾಸ್ಟರ್ ಪ್ಲಾನ್ ಆವರಣದಲ್ಲಿ 8 ಕಡೆಗಳಲ್ಲಿ ನಿರ್ಮಿಸಿರುವ ಘಟಕಗಳಿಗೆ ಶುದ್ಧ ಕುಡಿವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಭಕ್ತರು ಪರ ಮಾಡುವ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ರಾಜಗೋಪುರದ ಮುಂಭಾಗದ 2 ಕಡೆ ಹಾಗೂ ಇನ್ನಿತರ ಕಡೆಯಲ್ಲಿ ಭಕ್ತರು ತಂಗಲು, ದೇವರ ದರ್ಶನ ಪಡೆಯಲು ತೆರಳುವ ಸರತಿ ಸಾಲಿನಲ್ಲಿ ಹಾಗೂ ವಿಶೇಷ ದಾಸೋಹದಲ್ಲಿ ಶಾಮಿಯಾನ ಅಳವಡಿಸಲಾಗಿದೆ. ಬೆಳಗ್ಗೆ 7 ರಿಂದ ಮಧ್ಯರಾತ್ರಿಯವರೆಗೂ ನಿರಂತರ ದಾಸೋಹ (ಪ್ರಸಾದ) ವ್ಯವಸ್ಥೆಗೆ 300 ಕ್ವಿಂಟಾಲ್ ಅಕ್ಕಿಯನ್ನು ತಯಾರು ಮಾಡಿಕೊಳ್ಳಲಾಗಿದೆ. ಇನ್ನು ಮುಖ್ಯವಾಗಿ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಭಕ್ತರು ದೇವರ ದರ್ಶನ ಪಡೆಯಲು ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ ನಡೆದಿದೆ. ಪಾದಯಾತ್ರಿಗಳು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ದೇವರ ದರ್ಶನಕ್ಕೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಪೊಲೀಸ್ ಠಾಣೆ, ಆಸ್ಪತ್ರೆ ಮುಂಭಾಗ, ಪಾಲಾರ್ ರಸ್ತೆ ಬಳಿ, ತೋಟಗಾರಿಕೆ ಇಲಾಖೆಯ ಸಮೀಪದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇತ್ತ ಅಂತರಗಂಗೆಯ ಬೃಹತ್ ಶೌಚಗೃಹದ ಬಳಿ ಮಹಿಳೆಯರು ಹಾಗೂ ಪುರುಷರು ಸ್ನಾನ ಮಾಡಲು ಸುಮಾರು 300 ಪ್ರತ್ಯೇಕ ಶವರ್ ಅಳವಡಿಕೆ, ಬಟ್ಟೆ ಬದಲಾಯಿಸಿಕೊಳ್ಳಲು ಶೆಲ್ಟರ್ ನಿರ್ಮಾಣ, ಶೌಚಗೃಹಗಳ ಜತೆಗೆ 60 ತಾತ್ಕಾಲಿಕ ಶೌಚಗೃಹವನ್ನು ಅಳವಡಿಕೆ, ಲಗ್ಗೇಜ್ ಕೌಂಟರ್ ವ್ಯವಸ್ಥೆ, ದೇಗುಲ ಸೇರಿದಂತೆ ಮಾಸ್ಟರ್ ಪ್ಲಾನ್ ಆವರಣದಲ್ಲಿ ಝಗಮಗಿಸುವಂತೆ ವಿದ್ಯುತ್ ದೀಪಾಲಂಕಾರ, ದೇಗುಲಕ್ಕೆ ವಿವಿಧ ಬಗೆಯ ಹೂವಿನ ಅಲಂಕಾರ ಸೇರಿದಂತೆ ಜಾತ್ರೆ ಸುಸೂತ್ರವಾಗಿ ನಡೆಯಲು ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳು ನಡೆದಿದೆ.
ಸ್ವಚ್ಛತೆಗೆ ಹೆಚ್ಚಿನ ಒತ್ತು: ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಸ್ವಚ್ಛತೆಯನ್ನು ಕಾಪಾಡುವುದು ಪ್ರಾಧಿಕಾರಕ್ಕೆ ಸವಾಲಿನ ಕೆಲಸವಾಗಿದೆ. ಈ ದೆಸೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 142 ಪೌರ ಕಾರ್ಮಿಕರ ಜತೆಗೆ ಚಾ.ನಗರ, ಗುಂಡ್ಲುಪೇಟೆ, ಯಳಂದೂರು ಸ್ಥಳೀಯ ಸಂಸ್ಥೆಯ ಪೌರಕಾರ್ಮಿಕರನ್ನು ನಿಯೋಜಿಸಲು ಪ್ರಾಧಿಕಾರ ಕ್ರಮವಹಿಸಿದೆ. ದೇಗುಲದ ಆವರಣ, ಅಂತರಗಂಗೆ, ಮಾಸ್ಟರ್ ಪ್ಲಾನ್ ಆವರಣ, ತಾಳುಬೆಟ್ಟದಲ್ಲಿ ಈ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ನಿತ್ಯ ಬ್ಲೀಚಿಂಗ್ ಪೌಡರ್ ಹಾಗೂ ಪೆನಾಯಿಲ್ ಸಿಂಪಡಿಸುವುದರ ಮೂಲಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇನ್ನು ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ವೈದ್ಯ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರ ಮಾಡುವ ಸ್ಥಳದಲ್ಲಿ ಆಹಾರ ಪರೀಕ್ಷೆ, ನೀರಿನ ಗುಣಮಟ್ಟ ಪರೀಕ್ಷೆ, ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯಲ್ಲದೆ ತಾಳುಬೆಟ್ಟದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯಲು ಸೂಕ್ತ ಕ್ರಮಕೈಗೊಳ್ಳಲಾಗಿದೆ.
ಪೊಲೀಸ್ ಬಂದೋಬಸ್ತ್: ಭಕ್ತರ ಭದ್ರತೆಯ ದೃಷ್ಟಿಯಿಂದ 35 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಾಹನಗಳ ಏಕಮುಖ ಸಂಚಾರ, ನಿರ್ಬಂಧಿತ ಸ್ಥಳಗಳಿಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ತಾಳುಬೆಟ್ಟ ಹಾಗೂ ಪಾಲಾರ್‌ನಲ್ಲಿ ತಪಾಸಣಾ ಕೇಂದ್ರವನ್ನು ತೆರೆಯಲಾಗಿದ್ದು, ಅಕ್ರಮ ಮದ್ಯ ಸಾಗಣೆಯ ಮೇಲೆ ನಿಗಾ ವಹಿಸಲಾಗಿದೆ. ಒಬ್ಬರು ಡಿವೈಎಸ್ಪಿ, 7 ಇನ್ಸ್‌ಪೆಕ್ಟರ್, 18 ಸಬ್ ಇನ್ಸ್‌ಪೆಕ್ಟರ್, 26 ಎಎಸೈ, 277 ಪುರುಷ ಪೊಲೀಸರು, 38 ಮಹಿಳಾ ಪೊಲೀಸರು, 238 ಗೃಹ ರಕ್ಷಕ ದಳ ಸಿಬ್ಬಂದಿ, 3 ಡಿಆರ್ ಹಾಗೂ 1 ಕೆಎಸ್‌ಆರ್‌ಪಿ ತುಕಡಿಯನ್ನು ಜಾತ್ರೆಗೆ ನಿಯೋಜಿಸಲಾಗಿದೆ.
ತೇರು ಕಟ್ಟಲು ಚಾಲನೆ: ಮಾದಪ್ಪನ ಸನ್ನಿಧಿಯಲ್ಲಿ ನ.2 ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವವು ಜರುಗಲಿದೆ. ಈ ಹಿನ್ನಲೆ ಸೋಮವಾರ ದೇಗುಲದ ಮುಂಭಾಗದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ತೇರು ಕಟ್ಟುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಇನ್ನು ಜಾತ್ರೆ ವೇಳೆ ನಡೆಯುವ ಎಣ್ಣೆಮಜ್ಜನ ಸೇವೆ, ಹಾಲರವಿ ಉತ್ಸವ ಹಾಗೂ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಪ್ರಾಧಿಕಾರ ಸಹಕಾರದಿಂದ ಅರ್ಚಕರು ಸಿದ್ಧತೆ ಮಾಡಿಕೊಂಡಿದ್ದಾರೆ.
4 ಲಕ್ಷ ಲಾಡು ತಯಾರಿಕೆ: ಮ.ಬೆಟ್ಟಕ್ಕೆ ಆಗಮಿಸುವ ಬಹುತೇಕ ಭಕ್ತರು ಇಲ್ಲಿ ಸಿಗುವ ಲಾಡು ಪ್ರಸಾದವನ್ನು ದೇವರ ಮಹಾಪ್ರಸಾದವೆಂದು ಭಾವಿಸುತ್ತಾರೆ. ಹಾಗಾಗಿ ಜಾತ್ರಾ ಸಂದರ್ಭಗಳಲ್ಲಿ ಲಕ್ಷಾಂತರ ಲಾಡು ಮಾರಾಟವಾಗುತ್ತದೆ. ಈ ದೆಸೆಯಲ್ಲಿ ದೀಪಾವಳಿ ಜಾತ್ರೆಗೆ ಸುಮಾರು 4 ಲಕ್ಷ ಲಾಡು ತಯಾರಿಸಲು ನಿರ್ಧರಿಸಲಾಗಿದೆ. ಈಗಾಗಲೇ 2.5 ಲಕ್ಷ ಲಾಡು ತಯಾರಿಸಿದ್ದು, ಈ ಕಾರ್ಯ ಮುಂದುವರಿದಿದೆ. ಒಟ್ಟಿನಲ್ಲಿ ಯಶಸ್ವಿ ದೀಪಾವಳಿ ಜಾತ್ರೆಗೆ ಪ್ರಾಧಿಕಾರ ಅಗತ್ಯ ಮುಂಜಾಗ್ರತಾ ಕ್ರಮವಹಿಸಿದೆ.