ಇಂದಿನಿಂದ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ

ಇಂದಿನಿಂದ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ
Published on

ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಮಾದಲಗೆರೆ ಗ್ರಾಮದ ತೋಪಿನಲ್ಲಿರುವ ಶ್ರೀ ಮಹದೇಶ್ವರಸ್ವಾಮಿಯ 89ನೇ ಜಾತ್ರಾ ಮಹೋತ್ಸವ ಫೆ.27ರಿಂದ ಮಾ.6ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಮಾದಲಗೆರೆ, ನಿಂಬೇಹಳ್ಳಿ, ಮಹದೇಶ್ವರ ಬಡಾವಣೆ, ಎಂ.ಕೆ.ಚಿಕ್ಕೆನಹಳ್ಳಿ, ಎಂ.ಕೆ.ಹೊಸೂರು, ಎಂ.ಕೆ.ರಂಗನಾಥಪುರ ಹಾಗೂ ಎಂ.ಕೆ.ಲಕ್ಷ್ಮೀಪುರ ಸೇರಿದಂತೆ ಏಳು ಗ್ರಾಮಗಳ ಬುಡಕಟ್ಟು ಗ್ರಾಮಸ್ಥರಿಂದ ಆರು ದಿನಗಳ ಕಾಲ ಜಾತ್ರೆ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ಫೆ.27ರಂದು ಬೆಳಗ್ಗೆ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಿದ್ದು, ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ವಿದ್ಯುತ್ ದೀಪಾಲಂಕಾರ ಮಾಡಲಿದ್ದು, ವಿವಿಧ ಬಗೆಯ ಪುಷ್ಪಗಳಿಂದ ದೇಗುಲವನ್ನು ಅಲಂಕರಿಸಲಾಗುವುದು. ಸಂಜೆ ಮೂಲ ಸ್ಥಾನದಿಂದ ಸನ್ನಿಧಿಗೆ ಶ್ರೀ ಸ್ವಾಮಿಯವರ ಆಗಮನ, ಗಂಗಾ ಪೂಜೆ, ಧ್ವಜಾರೋಹಣ, ಶ್ರೀ ಗಣಪತಿ ಪೂಜೆ ಹಾಗೂ ಶ್ರೀ ಮಹದೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ ಜರುಗಲಿದೆ.

ಫೆ.28 ರಂದು ಬೆಳಗ್ಗೆಯಿಂದ ಪೂಜಾ ಕೈಂಕರ್ಯಗಳು ಜರುಗಲಿದ್ದು, ಸಂಜೆ ಮಾದಲಗೆರೆ ಹಾಗೂ ನಿಂಬೆಹಳ್ಳಿ ಸೇರಿದಂತೆ ಏಳು ಬುಡಕಟ್ಟು ಗ್ರಾಮಗಳಿಂದ ಅನ್ನದಾಸೋಹ ನಡೆಯಲಿದೆ.

ಮಾ.1 ರಂದು ಭಕ್ತರಿಂದ ಶ್ರೀ ಮಾದೇಶ್ವರಸ್ವಾಮಿಯವರ ಹುಲಿವಾಹನ ಸೇವೆ, ಎಂ.ಕೆ.ರಂಗನಾಥಪುರ ಗ್ರಾಮಸ್ಥರಿಂದ ಅನ್ನದಾಸೋಹ ಹಾಗೂ ಕುಂಭೇನಹಳ್ಳಿ ಕಪನಿಗೌಡರ ಸಾರಥ್ಯದಲ್ಲಿ ಸಂಜೆ ಐದು ಗಂಟೆಗೆ ಕೋಲಾಟ ಕಾರ್ಯಕ್ರಮ ಏರ್ಪಡಿಸಲಾಗಿದೆ.

ರಾತ್ರಿ 9 ಗಂಟೆಗೆ ಶ್ರೀ ಮಹದೇಶ್ವರ ಕ್ರೀಡಾಭಿಮಾನಿ ಬಾಯ್ಸ ವತಿಯಿಂದ ಹಗ್ಗ ಜಗ್ಗಾಟ ಹಮ್ಮಿಕೊಳ್ಳಲಾಗಿದ್ದು ಪ್ರಥಮ ಬಹುಮಾನವಾಗಿ ಟಗರು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ 10 ಸಾವಿರ ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನವಾಗಿ 5 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುವುದು.

ಮಾ.2 ರಂದು ಬಸವರಾಜು(ಗದೆ) ಗೆಳೆಯರ ಬಳಗದ ವತಿಯಿಂದ ಎರಡನೇ ವರ್ಷದ ಶ್ವಾನ ಓಟದ ಸ್ಪರ್ಧೆ ಹಮ್ಮಿಕೊಂಡಿದ್ದು, 5 ಸ್ಥಾನಗಳಿಗೆ ಬೆಳ್ಳಿ ಗದೆ ಬಹುಮಾನ ನೀಡಲಾಗುವುದು. ಮಾ.3 ರಂದು ಎಂದಿನಂತೆ ವಿಶೇಷ ಪೂಜೆ ಹಾಗೂ ಹುಲಿವಾಹನ ಸೇವೆ ನಡೆಯಲಿದೆ. ಇಂದ್ರನಹಳ್ಳಿ ಕೊಪ್ಪಲು ಗ್ರಾಮದ ಜಯಮ್ಮ ರಾಮಚಂದ್ರ ವಂಶಸ್ಥರಿಂದ ಅನ್ನದಾಸೋಹ ನಡೆಯಲಿದೆ. ಮಾ.4 ರಂದು ಬೆಳಗ್ಗೆ ಶ್ರೀ ಸ್ವಾಮಿಯ ಎತ್ತಿನ ಬಂಡಿ ಪಲ್ಲಕ್ಕಿ ಉತ್ಸವ, ಅನ್ನದಾಸೋಹ, ಮದ್ದು ಗುಂಡಿನ ಚಕಮಕಿಯೊಂದಿಗೆ ವೀರಭದ್ರನ ದೃತ್ಯ ನಡೆಯಲಿದೆ. ರಾತ್ರಿ ಸುಮಾರಿಗೆ ಚಿಕ್ಕೇನಹಳ್ಳಿ ಗ್ರಾಮಸ್ಥರಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದ್ದು, ಆಕರ್ಷಕ ಬಹುಮಾನ ವಿತರಿಸಲಾಗುವುದು.

ಮಾ.6 ರಂದು ಗಂಗಾ ಪೂಜೆ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಅನ್ನದಾಸೋಹ ನಡೆಯಲಿದ್ದು ದೇವರ ಉತ್ಸವ ಮಡಿಲಕ್ಕಿ ಸೇವೆ ಹಾಗೂ ಅನ್ನದಾಸೋಹ ಜರುಗಲಿದೆ. ದೇವರನ್ನು ಗುಡಿ ತುಂಬಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net