

ಅರಕಲಗೂಡು: ರಥಸಪ್ತಮಿ ದಿನವಾದ ಶುಕ್ರವಾರ ತಾಲೂಕಿನ ಬಸವಾಪಟ್ಟಣದ ಕೋಟೆ ಐತಿಹಾಸಿಕ ಶ್ರೀ ಲಕ್ಷ್ಮೀಕಾಂತಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಗ್ರಾಮದಲ್ಲಿ ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಕೃಷ್ಣ ಗಂಧೋತ್ಸವ ಸೇವೆ ಹಾಗೂ ದೇವರ ಬೆಳ್ಳಿ ಪಲ್ಲಕ್ಕಿ ಉತ್ಸವಗಳು ನಡೆದವು. ಬಳಿಕ ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿಸಿ ಉತ್ಸವ ಅಡ್ಡೆ ಮೇಲೆ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಜಯಘೋಷ ಹಾಕುತ್ತಾ ರಥ ಎಳೆದು ಭಕ್ತಿ ಮೆರೆದರು.
ರಥ ಮುಂದೆ ಚಲಿಸುವಾಗ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು. ಕೋಟೆ ರಥ ಬೀದಿಯಲ್ಲಿ ಗಣಪತಿ ದೇವಸ್ಥಾನದ ತನಕ ಚಲಿಸಿದ ತೇರು, ಮತ್ತೆ ವಾಪಸಾಗಿ ಸ್ವಸ್ಥಾನ ಸೇರಿತು. ಭಕ್ತರು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಜನರು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.