ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

IMG-20250313-WA0144
ಪಟ್ಟಣದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಎಚ್.ಡಿ.ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ ಪಾಲ್ಗೊಂಡಿದ್ದರು.
Published on

ಹೊಳೆನರಸೀಪುರ: ಪುರಾಣ ಪ್ರಸಿದ್ಧ ಪಟ್ಟಣದ ಪುರದೈವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಮಹಾ ಬ್ರಹ್ಮ ರಥೋತ್ಸವವು ಗೋವಿಂದನ ನಾಮ ಸ್ಮರಣೆಯೊಂದಿಗೆ ಅದ್ದೂರಿಯಾಗಿ ನೆರವೇರಿತು.

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಚತುರ್ಥಿಯ ಗುರುವಾರ ರಥೋತ್ಸವ ವೈಖಾನಸ ಆಗಮೋಕ್ತವಾಗಿ ನೆರವೇರಿಸಲಾಯಿತು. ಪವಿತ್ರ ಹೇಮಾವತಿ ನದಿ ತೀರದಲ್ಲಿ ವಿರಾಜಮಾನನಾದ ಶ್ರೀಲಕ್ಷ್ಮೀ ನರಸಿಂಹಸ್ವಾಮಿಯನ್ನು ಶುಭಲಗ್ನದಲ್ಲಿ ರಥಾರೋಹಣ ಮಾಡಲಾಯಿತು. ಸಾಲಾಗಿ ನಿಂತು ದೇವಾಲಯದ ತ್ರಿಕೂಟಾಚಲ ಸನ್ನಿಧಿಯಲ್ಲಿ ದರ್ಶನ ಪಡೆದ ಭಕ್ತರು, ರಥೋತ್ಸವದಲ್ಲಿ ಪಾಲ್ಗೊಂಡರು. ರಥಕ್ಕೆ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು. ಹೋಳಿ ಹುಣ್ಣಿಮೆಯ ದಿನದಂದೇ ರಥೋತ್ಸವ ಮುಹೂರ್ತ ಇದ್ದ ಕಾರಣ ಯುವಕರು ಪರಸ್ಪರ ಬಣ್ಣದಲ್ಲಿ ಮಿಂದೆದ್ದು, ರಥ ಎಳೆದು ಸಂಭ್ರಮಿಸಿದರು.

ಸಂಸದ ಶ್ರೇಯಸ್ ಎಂ.ಪಟೇಲ್ ರಥೋತ್ಸವದಲ್ಲಿ ಭಾಗಿಯಾಗಿ, ರಥವನ್ನು ಎಳೆಯುವುದರ ಮೂಲಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಈ ವೇಳೆ ಮಾತನಾಡಿ, ಕ್ಷೇತ್ರದಾದ್ಯಂತ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಅವರ ಕೃಪೆಗೆ ಪಾತ್ರರಾಗಿದ್ದು ಭಕ್ತಾದಿಗಳು ನಿತ್ಯವೂ ತಮ್ಮ ಬದುಕಿನಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವುದರ ಮೂಲಕ ಮಾದರಿಯಾಗಿ ಜೀವನ ರೂಪಿಸಿಕೊಳ್ಳಲಿ, ಉತ್ತಮ ಮಳೆ ಬೆಳೆ ಆಗಿ ರೈತರು ಅಭಿವೃದ್ಧಿ ಹೊಂದಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಶಾಸಕ ಎಚ್.ಡಿ.ರೇವಣ್ಣ, ಎಂಎಲ್ಸಿ ಡಾ.ಸೂರಜ್‌ರೇವಣ್ಣ ಜತೆಗೂಡಿ ದೇವಾಲಯದದಲ್ಲಿ ದೇವರ ದರ್ಶನ ಪಡೆದು, ರಥೋತ್ಸವ ಚಾಲನೆ ಸಂದರ್ಭದಲ್ಲಿ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ರೇಣುಕುಮಾರ್, ಎಎಸ್ಪಿ ಶಾಲೂ ಹಾಗೂ ವೃತ್ತನಿರೀಕ್ಷಕ ಪ್ರದೀಪ್ ಹಾಜರಿದ್ದರು.

ದೇವಾಲಯದ ಅಚ್ಚುಕಟ್ಟು ನಿರ್ವಹಣೆ ಮತ್ತು ಪ್ರಸಾದ ವಿನಿಯೋಗ ನೆರವೇರಿಸಿದ ತಾಲೂಕು ಆಡಳಿತ ಇದೇ ಮೊದಲ ಬಾರಿಗೆ ಯಾವ ರಾಜಕೀಯ ಪಕ್ಷದವರಿಗೂ ಪ್ರಸಾದ ವಿನಿಯೋಗದ ಗೊಂದಲಕ್ಕೆ ಆಸ್ಪದ ನೀಡದೇ ಎಲ್ಲ ವಿವಾದಕ್ಕೂ ತೆರೆ ಎಳೆದಿದ್ದರು. ರಥೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳು, ವೃತ್ತ ಹಾಗೂ ಕಚೇರಿ ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವದ ಮುನ್ನಾ ದಿನದಿಂದಲೇ ಆಗಮಿಸಿದ್ದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು, ನದಿ ಸ್ನಾನ, ದೇವರ ದರ್ಶನ ಪಡೆದು, ರಥೋತ್ಸವದಲ್ಲಿ ಪಾಲ್ಗೊಂಡರು. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆ ಪದಾಧಿಕಾರಿಗಳು ಹೊರಗಿಂದ ಯಾತ್ರಿಕರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಿದರು.

ಪೊಲೀಸರ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟೆಚ್ಚರ ವಹಿಸಿ ಭದ್ರತೆ ಒದಗಿಸಿದ್ದರು. ರಥ ಪ್ರದಕ್ಷಿಣಾ ಪಥದಲ್ಲಿ ಸಾಗಿ ಸುರಕ್ಷಿತವಾಗಿ ಸ್ವಸ್ಥಾನಕ್ಕೆ ತಲುಪಿತು.

ಅರ್ಚಕರಾದ ನಾರಾಯಣಭಟ್, ಸಿಂಹಾದ್ರಿ ನೇತೃತ್ವ್ವದಲ್ಲಿ ಸಕಲ ಪೂಜಾ ವಿಧಿ ನೆರವೇರಿತು. ಆಗಮನಕಾರರಾಗಿ ಜನಾರ್ಧನಭಟ್, ರವಿಕುಮಾರ್ ಸೇರಿದಂತೆ ಅರ್ಚಕರು ದೇವಾಲಯದಲ್ಲಿ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net