ಶಾಂತಳ್ಳಿಯಲ್ಲಿ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೋತ್ಸವ ಸಂಭ್ರಮ

16spt1
ಸೋಮವಾರಪೇಟೆ ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ಜಾತ್ರೋತ್ಸವದ ಅಂಗವಾಗಿ ಮಹಾರಥೋತ್ಸವ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.
Published on

ಸೋಮವಾರಪೇಟೆ: ಸಮೀಪದ ಐತಿಹಾಸಿಕ ಹಿನ್ನೆಲೆಯುಳ್ಳ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೋತ್ಸವದ ಅಂಗವಾಗಿ 65ನೇ ಮಹಾರಥೋತ್ಸವ ದೇವಾಲಯ ಆವರಣದಲ್ಲಿ ಮಂಗಳವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ ಸಂಸದ ಪ್ರತಾಪ್ ಸಿಂಹ, ಶಾಸಕ ಡಾ.ಮಂತರ್‌ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿಗಳಾದ ಎಸ್.ಜಿ.ಮೇದಪ್ಪ, ವೀಣಾ ಅಚ್ಚಯ್ಯ, ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಡಾ.ಶುಶ್ರೂತ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಸೇರಿದಂತೆ ಗ್ರಾಮದ ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

ಗ್ರಾಮದ ಮುಖ್ಯರಸ್ತೆಯಲ್ಲಿ ರಥವನ್ನು ಎಳೆಯಲಾಯಿತು. ಗ್ರಾಮ ನಿವಾಸಿಗಳು ತಮ್ಮ ಮನೆಯ ಮುಂದೆ ರಥ ಬರುತ್ತಿದ್ದಂತೆ ರಸ್ತೆಯನ್ನು ನೀರಿನಿಂದ ತೊಳೆದು, ರಂಗೋಲಿ ಬಿಡಿಸಿ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಕೀಲುಕುದುರೆ ಮತ್ತು ಬೊಂಬೆ ಕುಣಿತ ಜನರನ್ನು ಆಕರ್ಷಿಸಿತು. ರಸ್ತೆಯ ಇಕ್ಕೆಲಗಳಲ್ಲೂ ಭಕ್ತರು ನಿಂತು ರಥೋತ್ಸವವನ್ನು ವೀಕ್ಷಿಸಿದರು.

ದೂರದೂರಿನಿಂದ ಆಗಮಿಸಿದ ಭಕ್ತಾದಿಗಳು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ವಿಶೇಷ ತರಕಾರಿಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದರು. ಕಸೂತಿ ವಸ್ತುಗಳು, ಪರಿಶುದ್ಧ ಜೇನು ಮಾರಾಟಕ್ಕೆ ಇಡಲಾಗಿತ್ತು. ನವದಂಪತಿಗಳು ಪೂಜೆ ಸಲ್ಲಿಸಿದರು. ಕಳೆದ ಶನಿವಾರದಿಂದ ಜಾತ್ರೋತ್ಸವ ಪ್ರಾರಂಭವಾಗಿತ್ತು.

ಕೊಡಗು ರಾಜರ ಆಳ್ವಿಕೆ ಕಾಲದಿಂದ ಆಚರಣೆಯಲ್ಲಿರುವ ಪದ್ಧತಿಯಂತೆ ಕೊತ್ತನಳ್ಳಿ, ಕುಡಿಗಾಣ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಕೂತಿನಾಡು, ತೋಳುನಾಡು, ಯಡೂರು, ತಲ್ತಾರೆಶೆಟ್ಟಳ್ಳಿ ಗ್ರಾಮಗಳ ಗ್ರಾಮಸ್ಥರು ವಾದ್ಯಗೋಷ್ಠಿಯಿಂದ ದೇವಾಲಯದ ಪ್ರದಕ್ಷಿಣೆ ಹಾಕಿ ದೇವರಿಗೆ ಫಲ-ತಾಂಬೂಲ ಅರ್ಪಿಸಿ ಊರಿನ ಸಮೃದ್ಧಿಗೆ ಸಾಮೂಹಿಕ ಪೂಜೆ ಸಲ್ಲಿಸಿದರು.

ಕುಮಾರಳ್ಳಿ, ಜಕ್ಕನಳ್ಳಿ, ಇನಕನಹಳ್ಳಿ, ಕೊತ್ತನಳ್ಳಿ ಗ್ರಾಮಸ್ಥರು ಹಾಗೂ ದೇವರ ವಡೇಕಾರರು ಬರಿಗಾಲಿನಲ್ಲಿ 10 ಕಿ.ಮೀ.ದೂರದಲ್ಲಿರುವ ಪುಷ್ಪಗಿರಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರ ಸ್ವಾಮಿಯ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಪೂಜೆ ಸಲ್ಲಿಸಿದರು. ಜಾತ್ರೋತ್ಸವದ ಪ್ರಯುಕ್ತ ಮೂರು ದಿನ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಈ ನಾಡಿನ ಆರಾಧ್ಯ ದೇವರು. ಪ್ರತಿಯೊಬ್ಬರ ಮನೆಯಲ್ಲೂ ಮನೆದೇವರಾಗಿ ಕುಮಾರಲಿಂಗೇಶ್ವರನ್ನನ್ನೇ ಪೂಜೆ ಮಾಡುತ್ತಾರೆ. ವರ್ಷಂಪ್ರತಿ ಒಂದು ವಾರದವರೆಗೆ ಜಾತ್ರೋತ್ಸವ ನಡೆಯುತ್ತದೆ. ತಾವು ಬೆಳೆದ ಕೃಷಿ ಬೆಳೆಗಳನ್ನು ದೇವರಿಗೆ ಆರ್ಪಿಸಿ ನಂತರ ಬಳಕೆ ಮಾಡುವುದು ಇಲ್ಲಿನ ಜನರ ಪದ್ಧತಿಯಾಗಿದೆ. ಗುರು ಹಿರಿಯರ ಅಪೇಕ್ಷೆಯಂತೆ ಕಳೆದ 6 ದಶಕಗಳಿಂದ ಪ್ರತಿವರ್ಷ ರಥೋತ್ಸವ ಹಾಗೂ ಒಂದು ವಾರದ ತನಕ ಧಾರ್ಮಿಕ ವಿಧಿ ವಿಧಾನದಂತೆ ದೇವರ ಪೂಜೆ, ಉತ್ಸವಗಳು ನಡೆಯುತ್ತವೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಸಮಾರೋಪ: ಜ.17ರಂದು ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ತಲ್ತಾರೆಶೆಟ್ಟಳ್ಳಿ ಗ್ರಾಮದ ಕೆ.ಎ.ಅನನ್ಯಾ, ಕೆಎಸ್‌ಆರ್‌ಟಿಸಿ ಡಿಸಿಎಂ ಕೆ.ಎ.ರವೀಂದ್ರ, ಜೀಪು ಚಾಲಕ ಡಿ.ಬಿ.ನವೀನ್ ಅವರನ್ನು ಸನ್ಮಾನಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net