ಮಹಿಳೆಯರು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಲಿ; ಬಿ.ಗಣೇಶ್ ಸಲಹೆ

17-march-hdl-02
Published on

ಹೂವಿನಹಡಗಲಿ: ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಜತೆಗೆ ಸಮಾಜದಲ್ಲಿ ಹೇಗೆ ಜೀವಿಸಬೇಕು ಎಂಬುದನ್ನು ಮಹಿಳೆಯರು ಕಲಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ್ ಹೇಳಿದರು.


ಪಟ್ಟಣದ ಸೇವಾಲಾಲ್ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಜ್ಞಾನ ವಿಕಾಸ್ ಕೇಂದ್ರ ಹಾಗೂ ತಾಲೂಕು ಕಾನೂನು ಸಮಿತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೊಷ್ಠಿ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ತಾಲೂಕಿನಲ್ಲಿ 25 ಜ್ಞಾನ ವಿಕಾಸ ಕೇಂದ್ರಗಳಿವೆ. 48.85 ಲಕ್ಷ ರೂ. ಸಹಾಯಧನ ನೀಡಿಲಾಗಿದೆ. ಮರುಪಾವತಿಯಲ್ಲಿ ಶೇ.100 ಸಾಧನೆ ಮಾಡಿದ್ದು, ರಾಜ್ಯದಲ್ಲಿ ಮಾದರಿಯಾಗಿದೆ. ಈ ಸ್ವಸಹಾಯ ಸಂಘಗಳ ಮೂಲಕ ಪಡೆದ ಸಾಲವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುವ ಮೂಲಕ ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿಯೊಂದು ಕುಟುಂಬದಲ್ಲಿ ಪುರುಷನ ಸಮಾನ ಜವಾಬ್ದಾರಿಯನ್ನು ಮಹಿಳೆಯರು ಪಡೆದಿದ್ದಾರೆ. ಈ ಸೌಲಭ್ಯವನ್ನು ಮಹಿಳೆಯರು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತರಾಗಬೇಕು ಎಂದರು.


ಸರ್ಕಾರಿ ಸಹಾಯಕ ಅಭಿಯೋಜಕ ಅಜ್ಜಯ್ಯ ಕೆ. ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಅನೇಕ ಬಗೆಯ ಕೌಟುಂಬಿಕ ಕಲಹಗಳಿಗೆ ಮೂಲ ಕಾರಣ ಅನಕ್ಷರತೆ ಮತ್ತು ಮೌಢ್ಯಗಳಾಗಿವೆ. ಇವುಗಳಿಂದ ಹೊರಗುಳಿಯಬೇಕಾದರೆ ಮೊದಲು ಮಹಿಳೆಯರು ಅಕ್ಷರವಂತರಾಗಬೇಕು. ನಂತರ ಕಾನೂನಿನ ಅನೇಕ ಸೌಲಭ್ಯಗಳನ್ನು ಬಳಿಸಿಕೊಳ್ಳಲು ಮುಂದಾಗಬೇಕು ಎಂದರು.


ಮಹಿಳಾ ಮತ್ತು ಮಕ್ಕಳ ಸಾಧನಾ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸಂಸ್ಕೃತಿ ಮತ್ತು ಸಂಸ್ಕಾರ ಎಂಬ ವಿಷಯದ ಕುರಿತು ಉಪನ್ಯಾಸ ನೀಡದರು. ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು. ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಸದಸ್ಯ ಸಂತೋಷ್ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ತಿಲಕ್‌ರಾಜ್, ಸ್ವ-ಸಹಾಯ ಗುಂಪುಗಳ ಸದಸ್ಯೆಯರು ಭಾಗವಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net