

ಶ್ರೀರಂಗಪಟ್ಟಣ: ಇಲ್ಲಿನ ಶ್ರೀ ಕೃಷ್ಣ ರಾಜೇಂದ್ರ ಸಹಕಾರ ಸಂಘದ 13 ನಿರ್ದೇಶಕ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿದ್ದು, ಸಂಘದ ಷೇರುದಾರರು ಮತದಾನ ಮಾಡಿದರು.
ಪಟ್ಟಣದ ಸುಬ್ರಮಣ್ಯ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9ಕ್ಕೆ ಆರಂಭವಾದ ಚುನಾವಣೆ ಪ್ರಕ್ರಿಯೆ ಸಂಜೆ 4ರವರೆಗೂ ನಡೆಯಿತು. ಸಂಘದ ಒಟ್ಟು 13 ನಿರ್ದೇಶಕರ ಸ್ಥಾನಕ್ಕೆ 2 ಪಂಗಡಗಳಾಗಿ ಒಟ್ಟು 26 ಜನರು ಚುನಾವಣಾ ಕಣದಲ್ಲಿದ್ದರು.
ಒಟ್ಟು 1,194 ಷೇರುದಾರರಿದ್ದು, 563 ಜನರು ಮತದಾನ ಮಾಡಲು ಅರ್ಹತೆ ಹೊಂದಿದ್ದರು. ಆದರೆ ಸ್ಪರ್ಧಿಯೊಬ್ಬ ನ್ಯಾಯಾಲಯ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ 154 ಅನರ್ಹರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಹೀಗಾಗಿ ಮತ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ 3 ಬೂತ್‌ಗಳನ್ನು ನಿರ್ಮಿಸಿ ಮತದಾನಕ್ಕೆ ಅವಕಾಶ ಮಾಡಲಾಗಿತ್ತು.
ಒಟ್ಟು 563 ಅರ್ಹ ಮತದಾರರಲ್ಲಿ 542 ಮತಗಳು ಚಲಾವಣೆಗೊಂಡಿದೆ. ಅಂತೆಯೇ 154 ಅನರ್ಹ ಮತದಾರರಲ್ಲಿ 133 ಜನರು ಮತ ಚಲಾಯಿಸಿದ್ದಾರೆ. ಸದ್ಯ ಸಂಘದ ವಿಚಾರ ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಯನ್ನು ನ್ಯಾಯಾಲಯದ ಆದೇಶದವರೆಗೂ ಕಾಯ್ದಿರಿಸಲಾಗಿದೆ. ವಸೀಂ ಪಾಷ ಚುನಾವಣೆಯಲ್ಲಿ ರಿರ್ಟನಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದು, ಸಂಘದ ಸಿಇಒ ವಸಂತ್ ಕುಮಾರ್ ಉಸ್ತುವಾರಿ ವಹಿಸಿದ್ದರು.