ಶ್ರೀಕೃಷ್ಣನ ಜಾಣ್ಮೆ ಇಂದಿನ ಕಾಲಘಟ್ಟಕ್ಕೆ ಅವಶ್ಯ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ ಶಾಸಕ ಕಾಮತ್ ಹೇಳಿಕೆ

mng-sep6-townhall2
Published on


ಮಂಗಳೂರು: ಶ್ರೀಕೃಷ್ಣನ ಜಾಣ್ಮೆ, ಪ್ರಬುದ್ಧತೆ, ಮುತ್ಸದ್ಧಿತನ ಇಂದಿನ ಕಾಲಘಟ್ಟಕ್ಕೆ ಅತೀ ಅವಶ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.


ಜಗತ್ತಿನಲ್ಲಿರುವ ಅಧರ್ಮ, ಅನ್ಯಾಯ, ಅನಾಚಾರಗಳನ್ನು ಕೊನೆಗೊಳಿಸಿ, ಧರ್ಮ ಸಂಸ್ಥಾಪನೆಗೆ ಭಗವಂತ ಶ್ರೀಕೃಷ್ಣ ಮತ್ತೊಮ್ಮೆ ಅವತಾರವೆತ್ತುವ ಅಗತ್ಯವಿದೆ. ಭಾರತೀಯರಾಗಿ, ಈ ಮಣ್ಣಿನಲ್ಲಿ ಹಿಂದೂಗಳಾಗಿ ಹುಟ್ಟಿದವರಾಗಿ, ಇಲ್ಲಿನ ಜೀವನಾನುಭವವನ್ನು ತಿಳಿದವರಾಗಿ ದೇವರ ಬಗ್ಗೆ, ಧರ್ಮ ಸಂಸ್ಕೃತಿಯ ಬಗ್ಗೆ ನಿಕೃಷ್ಟವಾಗಿ ಮಾತನಾಡುವುದು ಶೋಭೆಯಲ್ಲ. ಇಂತಹ ಮಾನಸಿಕತೆಯಿಂದ ಹೊರ ಬರಬೇಕಾದ ಅಗತ್ಯವಿದೆ ಎಂದರು.


ಶ್ರೀ ಕೃಷ್ಣ ಜಯಂತಿ ಸಂದೇಶ ನೀಡಿದ ಶ್ರೀವತ್ಸ ಉಪಾಧ್ಯಾಯ ಕೊಲೆಕಾಡಿ ಅವರು, ಅಧರ್ಮ ತಾಂಡವವಾಡುತ್ತಿದ್ದಾಗ ಲೋಕ ರಕ್ಷಣೆಗಾಗಿ ಅವತರಿಸಿದ ಚೈನತ್ಯಾತ್ಮಕ ಶಕ್ತಿಯೇ ಶ್ರಿಕೃಷ್ಣ. ಭಗವಂತನ ಪ್ರತಿಯೊಂದು ಬಾಲ ಲೀಲೆಗಳೂ ಸಂದೇಶ ಪೂರಕವಾಗಿದೆ. ಅರ್ಜುನನಲ್ಲಿದ್ದ ನಾನು ಎನ್ನುವ ಅಹಂಭಾವವನ್ನು ನಾಶ ಮಾಡಿ ಉದ್ಧರಿಸಿದ್ದಾನೆ. ಪ್ರೀತಿಯಿಂದ ಆರಾಧಿಸುವ ಪ್ರತಿ ಮನೆಯಲ್ಲೂ ಕೃಷ್ಣ ಇರುತ್ತಾನೆ ಎಂದರು.


ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಗೊಲ್ಲ ಯಾನೇ ಯಾದವ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಎ.ಕೆ.ಮಣಿಯಾಣಿ ಬೆಳ್ಳಾರೆ ಉಪಸ್ಥಿತರಿದ್ದರು.


ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಶಿಕ್ಷಕಿ ರೇಣುಕಾ ಕಾಣಿಯೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net