

ಹುಬ್ಬಳ್ಳಿ : ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ಗೋಕುಲ ರಸ್ತೆ ಚೈತನ್ಯ ನಗರದ ಶ್ರೀ ಕೃಷ್ಟ ಜನ್ಮಾಷ್ಟಮಿ ಉತ್ಸವ ಸಮಿತಿಯಿಂದ ಆ. 15 ಹಾಗೂ 16ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಮಿತಿ ಅಧ್ಯಕ್ಷ ಪ್ರಕಾಶ ಕ್ಯಾರಕಟ್ಟಿ, 15ರಂದು ಮಧ್ಯರಾತ್ರಿ 12ಗಂಟೆಗೆ ಚೈತನ್ಯ ನಗರದ ಶ್ರೀ ವರಸಿದ್ಧಿ ವಿನಾಯಕ ಮಂದಿರದಲ್ಲಿ ಶ್ರೀ ಬಾಲಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಲಾಗುವುದು ಎಂದು ಹೇಳಿದರು.
ಅಕ್ಷಯ ಪಾರ್ಕ್ನ ಸಂತೆ ಮೈದಾನದಲ್ಲಿ 16ರಂದು ಮಧ್ಯಾಹ್ನ 12ಗಂಟೆಗೆ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪರ್ಧೆಗೆ ಚಾಲನೆ ನೀಡುವರು. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಮೊಸರಿನ ಗಡಿಗೆಗಳ ಮೆರವಣಿಗೆ ಜರುಗಲಿದ್ದು, ವಿವಿಧ ಮಹಿಳಾ ಮಂಡಳಗಳ ಸದಸ್ಯೆಯರು, ಕೃಷ್ಣ ರಾಧೆಯರ ವೇಷ ತೊಟ್ಟ 600ಕ್ಕೂ ಹೆಚ್ಚು ಮಕ್ಕಳು, ಡೊಳ್ಳು ಕುಣಿತ, ಗೊಂಬೆ ಕುಣಿತ ಮತ್ತು ಮಹಿಳಾ ಜಗ್ಗಲಗಿ ತಂಡಗಳು ಭಾಗವಹಿಸಲಿವೆ ಎಂದರು.
ಮೊಸರಿನ ಗಡಿಗೆ ಒಡೆಯುವ ತಂಡಕ್ಕೆ ಪ್ರಥಮ ಬಹುಮಾನವಾಗಿ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಈಗಾಗಲೇ ಆರು ತಂಡಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿವೆ ಎಂದು ತಿಳಿಸಿದರು.
ಕಿರಣ ಭರಾಡೆ, ಗುರುನಾಥ ಮುರಗೋಡ, ಶಂಕರಾಚಾರ್ಯ ಪುರೋಹಿತ, ಕೃಷ್ಣ ಗಂಡಗಾಳೇಕರ, ವಿರೂಪಾಕ್ಷ ಹಿರೇಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.