ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

7 GKN
Published on

ಗೋಕರ್ಣ: ಪಟ್ಟಣದ ವಿವಿಧೆಡೆ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ವೆಂಕಟ್ರಮಣ ಮಂದಿರದಲ್ಲಿ ಬುಧವಾರ ರಾತ್ರಿ ಬೆಳ್ಳಿಯ ತೊಟ್ಟಿಲಲ್ಲಿ ಬಾಲಕೃಷ್ಣನನ್ನು ತೂಗಿ ಸಾಂಕೇತಿಕವಾಗಿ ಶ್ರೀಕೃಷ್ಣ ಜನನವನ್ನು ಸಂಭ್ರಮಿಸಲಾಯಿತು.

ಸುಮಂಗಲಿಯರು ಹಾಡು ಹೇಳಿ ಬಾಲಕೃಷ್ಣನಿಗೆ ಆರತಿ ಬೆಳಗಿದರು. ಗುರುವಾರ ಬೆಳಗ್ಗೆ ಭಜನಾ ಸಮಾಪ್ತಿ ನಿಮಿತ್ತ ಕ್ಷೇತ್ರ ಪದ್ಧತಿಯಂತೆ ಪಾರಂಪರಿಕವಾಗಿ ಕೆಂಬಣ್ಣದ ನೀರು ಚೆಲ್ಲಿ ಓಕುಳಿಯಾಡಲಾಯಿತು. ತರುವಾಯ ಭಕ್ತರು ಮಂದಿರದ ಎದುರು ವಿಶೇಷ ಅಲಂಕಾರದಿಂದ ನಿರ್ಮಿಸಿದ ಮಾವಿನ ತಳಿರು-ತೋರಣಕ್ಕೆ ಕಟ್ಟಲಾದ ಮೊಸರು-ಗಡಿಗೆಯನ್ನು ಒಡೆದರು. ಕೊನೆಗೆ ಭಕ್ತರು ಮಂದಿರಕ್ಕೆ ಎದುರಾಗಿ ಎರಡು ಸಾಲಿನಲ್ಲಿ ಮಂಡಿಯೂರಿ ಅರ್ಧಾಸನದಲ್ಲಿ ಕುಳಿತು ಸಾಮೂಹಿಕ ಸ್ಮರಣೆಯೊಂದಿಗೆ ಶ್ರೀಕೃಷ್ಣನಿಗೆ ವಂದನೆ ಸಮರ್ಪಿಸಿದರು. ನಂತರ ಮೆರವಣಿಗೆಯಲ್ಲಿ ಸಾಗಿ ವಿವಿಧ ಪುರಾಣ ಪ್ರಸಿದ್ಧ ಮಂದಿರಗಳಿಗೆ ಭಜನಾ ಸ್ತುತಿಯೊಂದಿಗೆ ತೆರಳಿ ಪ್ರಾರ್ಥನೆ ಕೈಗೊಂಡರು.

ಆತ್ಮಲಿಂಗ ಸನ್ನಿಧಿಯಲ್ಲಿ: ಆತ್ಮಲಿಂಗ ಸನ್ನಿಧಿ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಶ್ರೀಕೃಷ್ಣ ಜನ್ಮನಿಮಿತ್ತ ನಂದಿಗೃಹದಲ್ಲಿನ ಶ್ರೀ ಗೋಪಾಲಕೃಷ್ಣ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಯಿತು. ಸಂಜೆ ಜರುಗಿದ ಶ್ರೀ ಮಹಾಬಲೇಶ್ವರ ದಧಿ-ಶಿಕ್ಯೋತ್ಸವದಲ್ಲಿ ವಿವಿಧ ನಿಗದಿತ ಸ್ಥಳಗಳಲ್ಲಿ ಮೊಸರು-ಗಡಿಗೆ ಒಡೆಯಲಾಯಿತು. ಕೋಟಿತೀರ್ಥದಲ್ಲಿನ ಪುರಾಣ ಪ್ರಸಿದ್ಧ ಗೋಪಾಲಕೃಷ್ಣ ಮಂದಿರದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮೊಸರು-ಗಡಿಗೆ ಉತ್ಸವ ನಿಮಿತ್ತ ಶ್ರೀ ಗೋಪಾಲಕೃಷ್ಣ ಮೂರ್ತಿಗೆ ಸರ್ವಾಲಂಕಾರ ಮಾಡಲಾಯಿತು. ಸಂಜೆ ಶ್ರೀ ಮಹಾಬಲೇಶ್ವರ ಉತ್ಸವ ಶ್ರೀ ಗೋಪಾಲಕೃಷ್ಣ ಸನ್ನಿಧಿಗೆ ಬಿಜಯಂಗೈದು ವಿಶೇಷ ಸೇವೆ ಮತ್ತು ಮಹಾಮಂಗಳಾರತಿ ಸ್ವೀಕರಿಸಿತು.

ಶ್ರೀಮಠದಲ್ಲಿ: ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಜನ್ಮಾಷ್ಟಮಿ ಶುಭಾವಸರದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಜಗದ್ಗುರು ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಮರ್ಪಿಸಿದರು. ನಂತರ ಬಾಲಕೃಷ್ಣ ಮೂರ್ತಿಯನ್ನು ತೊಟ್ಟಿಲಲ್ಲಿ ಇಟ್ಟು ವಂದಿಸಿ ಮಂಗಳಾರತಿ ಕೈಗೊಂಡರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲ ಮಕ್ಕಳಿಂದ ವಿವಿಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net