

ಬೆಂಗಳೂರು: ಹೊಸ ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದ ಸ್ವಾಮಿಯ 76ನೇ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆಯಿಂದ ಹೋಮ-ಹವನ ಸೇರಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಬಳಿಕ ದೇವರಿಗೆ ಅಭಿಷೇಕ, ಮಹಾಮಂಗಳಾರತಿ ನಡೆಸಿದ ಬಳಿಕ ಉತ್ಸವಮೂರ್ತಿಯನ್ನು ರಥದಲ್ಲಿರಿಸಿ ವಿಶೇಷ ಪೂಜೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಗೋವಿಂದ, ಗೋವಿಂದ ಎಂದು ನಾಮಸ್ಮರಣೆ ಮಾಡಿ ರಥವನ್ನು ಎಳೆದರು.
ರಥೋತ್ಸವದಲ್ಲಿ ಬ್ಯಾಟರಾಯನಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಶ್ರೀ ಕೋದಂಡರಾಮಸ್ವಾಮಿ ದೇವರನ್ನು ಕಣ್ತುಂಬಿಕೊಂಡರು. ರಾತ್ರಿಯವರೆಗೂ ಪೂಜೆ, ಪುನಸ್ಕಾರ ನಡೆಯಿತು. ಶ್ರೀ ಅಕ್ಷಯ ಅನ್ನದಾನ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಅನ್ನಸಂತರ್ಪಣೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದ ಸ್ವೀಕರಿಸಿದರು.
ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:
ರಥೋತ್ಸವ ಹಿನ್ನೆಲೆಯಲ್ಲಿ ಸಂಜೆ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಕ್ತಿಗೀತೆಗಳ ಗಾಯನ, ಸುಗಮ ಸಂಗೀತ, ಭರತನಾಟ್ಯ, ಗುಂಪು ನೃತ್ಯ ಹಾಗೂ ಹಾಸ್ಯ ಕಾರ್ಯಕ್ರಮವನ್ನು ಜನರು ವೀಕ್ಷಿಸಿ ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.