

ಕಡೂರು: ತಾಲೂಕಿನ ಸಿಂಗಟಗೆರೆ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮೇ.23ರಂದು ಮಧ್ಯಾಹ್ನ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ.ನಾಗರಾಜ್ ಹೇಳಿದರು.
ಒಂದು ವಾರ ನಡೆಯುವ ಜಾತ್ರಾ ಮಹೋತ್ಸವಕ್ಕೆ ಮೇ.19ರಂದು ಚಾಲನೆ ದೊರೆಯಲಿದೆ. ರಾತ್ರಿ ಮಹಾಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹ, ದೇವನಾಂದಿ, ಕೌತುಕ ಬಂಧನ, ಮೃತ್ಸಂಗ್ರಹಣ, ಅಂಕುರಾರ್ಪಣ, ಧ್ವಜಾರೋಹಣ, ದೇವತಾವಾಹನ, ಭೇರಿತಾಡನ ಕಳಸ ಸ್ಥಾಪನೆ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಮೇ.20 ರಂದು ಬೆಳಗ್ಗೆ ನಿತ್ಯಹೋಮ, ಬಲಿಪ್ರಧಾನ ವೃಷಭವಾಹನೋತ್ಸವ, ಸಂಜೆ ಸಿಂಹ ಮತ್ತು ಮಯೂರ ವಾಹನೋತ್ಸವ, 21ಕ್ಕೆ ನಂದಿ ವಾಹನೋತ್ಸವ, ಸರ್ಪ ವಾಹನೋತ್ಸವ ನಡೆಯಲಿದೆ. 22ರಂದು ಉಯ್ಯಲೋತ್ಸವ, ಅಶ್ವವಾಹನೋತ್ಸವ, ಶ್ರೀಗಿರಿಜಾ ಕಲ್ಯಾಣೋತ್ಸವ, ಗಜವಾಹನೋತ್ಸವ, 23ಕ್ಕೆ ನಿತ್ಯಹೋಮ ರಥಾದೇವತಾ ಹೋಮ, ರಥಸಂಪ್ರೋಕ್ಷಣೆ, ಬಲಿಪ್ರಧಾನ ನಂತರ ಮಧ್ಯಾಹ್ನ ಕೃಷ್ಣಗಂಧೋತ್ಸವ ಶುಭ ಮುಹೂರ್ತದಲ್ಲಿ ಶ್ರೀಸ್ವಾಮಿಯವರ ಬ್ರಹ್ಮರಥೋತ್ಸವ ನಡೆಯಲಿದೆ. 24ರಂದು ಶಯನೋತ್ಸವ ಹಾಗೂ ಶ್ರೀ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನೆರವೇರಲಿದೆ. 25ಕ್ಕೆ ನಿತ್ಯಹೋಮ ಮಹಾಪೂರ್ಣಾಹುತಿ ಅವಭೃತಸ್ನಾನ, ಸಂಜೆ ಧ್ವಜಾವರೋಹಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.