

ಬೆಳ್ತಂಗಡಿ: ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಉಜಿರೆಯಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಅಧ್ಯಕ್ಷತೆ ವಹಿಸಿ, ವರದಿ ಸಾಲಿನಲ್ಲಿ ಸಂಘ ಒಟ್ಟು 142.59 ಕೋಟಿ ರೂ. ವ್ಯವಹಾರ ನಡೆಸಿ 54,35,515 ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು. ವರದಿ ಸಾಲಿನಲ್ಲಿ ಸಂಘದಲ್ಲಿ 1688 ಸದಸ್ಯರನ್ನು ಹೊಂದಿದ್ದು 2,21,05,718 ಕೋಟಿ ರೂ. ಪಾಲು ಬಂಡವಾಳ ಸಂಗ್ರಹವಾಗಿದೆ. 26,77,01,956 ಕೋಟಿ ರೂ. ಠೇವಣಿ ಸಂಗ್ರಹಿಸಿ ಒಟ್ಟು 26,20,6972 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕರಾದ ಕೆ.ಗಂಗಾಧರ ಗೌಡ, ಎನ್.ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ.ಜಯಂತ್ ಗೌಡ ಗುರಿಪಳ್ಳ, ಸುಂದರ ಗೌಡ ಫುಡ್ಕೆತ್ತು, ಬಿ.ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ ಅಡ್ಕಡಿ, ಜಯಂತ್ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಬಂಗಾಡಿ, ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ, ಚೇತನಾ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ದೈನಿಕ ಠೇವಣಿ ಸಂಗ್ರಾಹಕರನ್ನು ಸನ್ಮಾನಿಸಲಾಯಿತು. ಸಿಇಒ ದಿನೇಶ್ ಗೌಡ ಕಲ್ಲಾಜೆ ವರದಿ ಮಂಡಿಸಿದರು. ನಿರ್ದೇಶಕ ದಾಮೋದರ ಗೌಡ ವಂದಿಸಿದರು.
ಯೋಜಿತ ಕಾರ್ಯಕ್ರಮಗಳು
ಸಹಕಾರಿಯ ವಾರ್ಷಿಕ ವ್ಯವಹಾರವನ್ನು 142 ಕೋಟಿ ರೂ.ನಿಂದ 175 ಕೋಟಿ ರೂ.ಗೆ ಹೆಚ್ಚಿಸುವುದು, ಪಾಲು ಬಂಡವಾಳ ಮೊತ್ತವನ್ನು 2.50 ಕೋಟಿ ರೂ. ಏರಿಸುವುದು, ಹೊಸದಾಗಿ ಸ್ವಸಹಾಯ ಗುಂಪುಗಳನ್ನು ರಚಿಸುವುದು, ಸಹಕಾರಿ ಠೇವಣಿಯನ್ನು 37 ಕೋಟಿ ರೂ.ಗೆ ಏರಿಸುವುದು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅನುಮತಿ ಪಡೆದು ಬೆಳ್ತಂಗಡಿ ತಾಲೂಕಿನಲ್ಲಿ ಬೆಳ್ತಂಗಡಿ ನಗರ, ವೇಣೂರು, ಗೇರುಕಟ್ಟೆ, ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಶಾಖೆ ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ರಂಜನ್ ಜಿ.ಗೌಡ ತಿಳಿಸಿದ್ದಾರೆ.