

ಕೆ.ಎಂ.ದೊಡ್ಡಿ: ದಕ್ಷಿಣ ಭಾರತದ ಚಿಕ್ಕಕಾಶಿ ಎಂದೆ ಖ್ಯಾತಿ ಪಡೆದಿರುವ ಸಮೀಪದ ಚಿಕ್ಕರಸಿನಕೆರೆ ಪುಣ್ಯ ಕ್ಷೇತ್ರದಲ್ಲಿ ಶ್ರೀ ಕಾಲ ಭೈರವೇಶ್ವರ ಜಾತ್ರೋತ್ಸವ ಭಾನುವಾರ ಕೊಂಡ, ಬಂಡಿಗಳ ಉತ್ಸವಗಳೊಂದಿಗೆ ವಿಧ್ಯುಕ್ತವಾಗಿ ಆರಂಭವಾಯಿತು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರುತ್ತಿದ್ದು, ಗ್ರಾಮವು ನವವಧುವಿನಂತೆ ಸಿಂಗಾರಗೊಂಡಿದೆ. ಗ್ರಾಮ ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮಸ್ಥರು ಹಬ್ಬದಲ್ಲಿ ಭಾಗವಹಿಸುತ್ತಾರೆ.
ಭಾನುವಾರ ಬೆಳಗ್ಗೆ 9 ಗಂಟೆಗೆ ಚಿಕ್ಕರಸಿನಕರೆ ಬ್ರಾಹ್ಮಣರಿಂದ ಹೋಮ ಪೂಜೆ, ಸಂಜೆ 4 ಗಂಟೆಗೆ ಕೊಂಡ ಬಂಡಿಗಳ ಉತ್ಸವ ನಡೆಯಿತು. ಚಿಕ್ಕರಸಿನಕೆರೆ, ಗುರುದೇವರಹಳ್ಳಿ ಮತ್ತು ಹುಣನದೊಡ್ಡಿ ಗ್ರಾಮಸ್ಥರಿಂದ ರಾತ್ರಿ 10 ಗಂಟೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ, ಕಾರ್ಕಳ್ಳಿ ಬಸವೇಶ್ವರ ಸ್ವಾಮಿ, ದೊಡ್ಡರಸಿನಕೆರೆ ಶ್ರೀ ಏಳೂರಮ್ಮ ಕಾಳಮ್ಮ ಹಾಗೂ ಬುಳಿಕೆಂಪನದೊಡ್ಡಿ ಗ್ರಾಮದ ನಿಶಾನಿ ದೇವರುಗಳು ಉತ್ಸವ ವೈಭವದಿಂದ ಜರುಗಿತು. ಹುನಗನಹಳ್ಳಿ ಗ್ರಾಮಸ್ಥರಿಂದ ಕರಗದ ಉತ್ಸವ, ಗುರುದೇವರಹಳ್ಳಿ ಶ್ರೀ ಬಸವೇಶ್ವರ ಪೂಜೆ ಹಾಗೂ ಮುಟ್ಟನಹಳ್ಳಿ ಶ್ರೀ ಕಾಲಭೈರವೇಶ್ವರ ಸ್ವಾಮಿ, ಛತ್ರದಹೊಸಹಳ್ಳಿ ಗ್ರಾಮದವರಿಂದ ಛತ್ರಿ ಹಾಗೂ ದೇವಾನುದೇವತೆಗಳ ಉತ್ಸವು ಬಹಳ ವಿಜೃಂಭಣೆಯಿಂದ ನಡೆಯಿತು.
ಏ. 14ರಂದು ಬೆಳಗ್ಗೆ 6.30ಕ್ಕೆ ಶ್ರೀ ಕಾಲಭೈರವೇಶ್ವರ ಅಗ್ನಿ ಕೊಂಡೋತ್ಸವ ನಡೆಯಲಿದೆ. ನಂತರ ಹೆಡಿಗೆಗಳ ಮೇಲೆ ಮಹಿಳೆಯರು ಆರತಿ ಬೆಳಗಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಬೇಲೂರು ಕುಲದವರಿಂದ ಅನ್ನಸಂತರ್ಪಣೆ, ಸಂಜೆ 6.30ಕ್ಕೆ ಸಿ.ಎ.ಕೆರೆ ಹೋಬಳಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಸರ್ವ ಬಣಜಿಗ ಬಲಿಜ ಸಂಘದ ವತಿಯಿಂದ ಶ್ರೀ ವೀರಾಂಜನೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ. ರಾತ್ರಿ 9ಕ್ಕೆ ಶ್ರೀ ಕಾಲಭೈರವೇಶ್ವರ ಕಲಾ ಬಳಗ ನಾಟಕ ಏರ್ಪಡಿಸಲಾಗಿದೆ.
ಏ.15ರಂದು ಅರೆಕಲ್ಲು ದೊಡ್ಡಿ, ಬನ್ನಹಳ್ಳಿ ಹಾಗೂ ಹೊನ್ನಾಯಕನಹಳ್ಳಿ ಕುಲದವರಿಂದ ಮಧ್ಯಾಹ್ನ 2.30ಗಂಟೆಗೆ ಅನ್ನಸಂತರ್ಪಣೆ ನಂತರ ಶ್ರೀಕಾಲಭೈರವೇಶ್ವರ ಸ್ವಾಮಿ ವೈಭವದ ರಥೋತ್ಸವ ಜರುಗಲಿದೆ. ಇದರ ಜತೆಗೆ ವಿವಿಧ ದೇವರುಗಳ ಉತ್ಸವ ನಡೆಯಲಿದೆ.
ಏ.16 ರಂದು ಚಿಕ್ಕರಸಿನಕೆರೆ, ಗುರುದೇವರಹಳ್ಳಿ ಗ್ರಾಮಗಳಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಓಕುಳಿ ಸೇವೆ ಉತ್ಸನ ನಡೆಯಲಿದ್ದು ಏ.17ರಂದು ಹುಣ್ಣನದೊಡ್ಡಿ ಗ್ರಾಮದಲ್ಲಿ ಓಕುಳಿ ಸೇವೆ ಉತ್ಸವ ಏರ್ಪಡಿಸಲಾಗಿದೆ. ಏ.18ರಂದು ಛದ್ರದ ಹೊಸಹಳ್ಳಿ ಗ್ರಾಮಸ್ಥರಿಂದ ಓಕುಳಿ ಉತ್ಸವ, ಏ.20 ರಂದು ಶ್ರೀ ಚನ್ನಪ್ಪಾಜಿ ಸ್ವಾಮಿಯ ಸಿದ್ದಭಕ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.