ಬೆಂಗಳೂರಿನಲ್ಲಿ ಕಾಶೀ ಜಗದ್ಗುರುಗಳ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಆರಂಭ

kashi
Published on

ಬೆಂಗಳೂರು: ಜಗತ್ತಿನಲ್ಲಿ ಲೌಕಿಕವಾದ ಹಲವು ವಿದ್ಯೆಗಳಿವೆ. ಆದರೆ ಆತ್ಮವಿಧ್ಯೆಗೆ ಇರುವ ಶಕ್ತಿ ಬೇರೆ ವಿದ್ಯೆಗಳಿಗೆ ಇರುವುದಿಲ್ಲ. ಅಂತರಂಗವನ್ನು ಶುದ್ಧಿಗೊಳಿಸುವುದೇ ಆತ್ಮವಿಧ್ಯೆ ಎಂದು ಕಾಶೀ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಆಯೋಜಿಸಿದ್ದ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹರ್ಷಿಗೆ ಬೋದಿಸಿರುವ ಶಿವಾದ್ವೈತ ಸಿದ್ಧಾಂತದ ಸಾರವಾಗಿರುವ ಶ್ರೀಸಿದ್ಧಾಂತ ಶಿಖಾಮಣಿಯ 18ನೇ ಪರಿಚ್ಛೇದದಲ್ಲಿರುವ ಆತ್ಮಸ್ಥಲದಲ್ಲಿ ಆತ್ಮವಿಧ್ಯೆಯ ಮಹತ್ವವನ್ನು ಹೇಳಿದ್ದಾರೆ. ಮನುಷ್ಯ ಕಲಿತಿರುವ ಸರ್ವ ವಿದ್ಯೆಗಳ ಸದುಪಯೋಗವಾಗಬೇಕೆಂದರೆ ಆತನಿಗೆ ಆತ್ಮದ ದರ್ಶನವಾಗಬೇಕು. ಅಂತಹ ಆತ್ಮದರ್ಶನ ಮಾಡಿಸಲು ಆತ್ಮವಿದ್ಯೆ ಪೂರಕವಾಗಿದೆ ಎಂದು ಆತ್ಮಸ್ಥಲದಲ್ಲಿ ಜಗದ್ಗುರು ರೇಣುಕಾಚಾರ್ಯರು ತಿಳಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಗಂಗೆ ಮೇಲಣಗವಿ ಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಆತ್ಮವಿರದ ದೇಹಕ್ಕೆ ಬೆಲೆ ಇಲ್ಲ. ಶಿವನ ಅಂಶೀಭೂತವಾದ ಮನುಷ್ಯ ಆತ್ಮರಹಸ್ಯವನ್ನು ಅರಿತು ಸ್ವತಃ ತಾನೇ ಶಿವನಾಗುವ ಅದ್ಭುತ ಸಿದ್ಧಾಂತವನ್ನು ಜಗದ್ಗುರು ರೇಣುಕಾಚಾರ್ಯರು ಬೋದಿಸಿದ್ದಾರೆ. ಪ್ರತಿಯೊಬ್ಬನ ಅಂತರಂಗದಲ್ಲಿ ಅತ್ಯಂತ ಸೂಕ್ಷ್ಮ ರೂಪದಲ್ಲಿರುವ ಆತ್ಮವನ್ನು ಅರಿಯುವುದೇ ಮನುಷ್ಯ ಜನ್ಮದ ಬಹುದೊಡ್ಡ ಸಾಧನೆ ಎಂದರು.

ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿ, ಸಹ ಕಾರ್ಯದರ್ಶಿ ಕೆ.ಎಸ್.ಗಾಯತ್ರಿ,  ಉಪಾಧ್ಯಕ್ಷರಾದ ಚನ್ನಬಸವಾರಾಧ್ಯರು, ಪೋಷಕ ಮಂಡಳಿ ಸದಸ್ಯರಾದ ಮಾದಯ್ಯ, ಶಾಂತ ವಿ.ಗೌಡ್, ಪ್ರಣವ್ ಜಯಲಿಂಗಪ್ಪ, ಜಯಂತ್ ಕುಮಾರ್, ಸುನಂದ ಬಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಮಂಗಳವಾರದ  ಕಾರ್ಯಕ್ರಮದಲ್ಲಿ :

ಮಂಗಳವಾರ ಬೆಳಗ್ಗೆ 7 ಗಂಟೆಗೆ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರ ಧನುರ್ಮಾಸದ ಪೂಜಾನುಷ್ಠಾನ. ಸಂಗೀತಯುಕ್ತ, ರುದ್ರ ಸಹಿತ ಮಹಾಪೂಜೆಯಲ್ಲಿ ಸರ್ವ ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶ ಉಂಟು. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ. ಕಾಶೀ ಜಗದ್ಗುರುಗಳ ಸಾನ್ನಿಧ್ಯ, ಶಿವಗಂಗೆ ಮತ್ತು ವಿಭೂತಿಪುರ ಮಠದ ಶ್ರೀಗಳ ನೇತೃತ್ವ. ಖ್ಯಾತ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net