ಜಯದೇವ ಸಂಸ್ಥೆಯಲ್ಲಿ 170 ರೋಗಿಗಳು ಉಚಿತ ಆಂಜಿಯೋಪ್ಲಾಸ್ಟಿ ಚಿಕಿತ್ಸೆ

Jayadeva hospital
Published on

ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಸಿದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರಗಳಿಂದ ಸಮಾಜದ ದುರ್ಬಲ ವರ್ಗಗಳ 170 ರೋಗಿಗಳಿಗೆ ಹೊಸ ಜೀವನ ದೊರೆತಿದೆ.

ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್ ಮತ್ತು ಮೆಡ್‌ಟ್ರಾನಿಕ್ ವ್ಯಾಸ್ಕುಲರ್ ವಿಭಾಗ, ಯುಎಸ್‌ಎನ ಸಂತಾರೋಸಾ ಸಹಯೋಗದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸೆ. 24ರಿಂದ ಐದು ದಿನಗಳ ಕಾಲ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟಿಂಗ್ ಕಾರ್ಯವಿಧಾನಗಳ ಕಾರ್ಯಾಗಾರ ನಡೆಸಲಾಯಿತು.

ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಬಿಹಾರದ ರೈತರು, ದಿನಗೂಲಿಗಳು, ಬೀದಿ ವ್ಯಾಪಾರಿಗಳು, ಆಟೋರಿಕ್ಷಾ ಚಾಲಕರು, ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಹಿರಿಯ ನಾಗರಿಕರು ಇದರ ಲಾನುಭವಿಳಾಗಿದ್ದಾರೆ. ಒಬ್ಬ ರೋಗಿಗೆ ಒಂದಕ್ಕಿಂತ ಹೆಚ್ಚು ಸ್ಟೆಂಟ್‌ಗಳ ಅಗತ್ಯವಿದ್ದು, 170 ರೋಗಿಗಳಿಂದ ಸುಮಾರು 200 ಸ್ಟೆಂಟ್‌ಗಳನ್ನು ಉಚಿತವಾಗಿ ಅಳವಡಿಸಲಾಗಿದೆ.

ಸಂಸ್ಥೆಯ ನಿರ್ದೇಶಕ ಕೆ ಎಸ್. ರವೀಂದ್ರನಾಥ್, ಐದು ದಿನಗಳ ಅವಧಿಯಲ್ಲಿ 170 ಆಂಜಿಯೋಪ್ಲ್ಯಾಸ್ಟಿ ನಡೆಸುಲು ತಾಂತ್ರಿಕವಾಗಿ ಹೆಚ್ಚು ಹೊಂದಿದೆ. ಸಂಸ್ಥೆಯು 17 ಕ್ಯಾಥ್ ಲ್ಯಾಬ್‌ಗಳು ಹಾಗೂ 120 ಪೂರ್ಣಾವಧಿಯ ಹೃದ್ರೋಗ ತಜ್ಞರು ಮತ್ತು ಸಾಕಷ್ಟು ಸಂಖ್ಯೆಯ ತಾಂತ್ರಿಕ ಮತ್ತು ನರ್ಸಿಂಗ್ ಸಿಬ್ಬಂದಿ ಹೊಂದಿರುವುದರಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

170 ರೋಗಿಗಳಲ್ಲಿ  ಶೇ. 24 ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 27 ಮಂದಿ ಮಹಿಳೆಯರು. ಚಿಕಿತ್ಸೆ ಪಡೆದವರಲ್ಲಿ ಕಿರಿಯ ರೋಗಿಯು 32 ವರ್ಷದವರಾಗಿದ್ದು, ಹಿರಿಯ ರೋಗಿ 77 ವರ್ಷದ ಕೂಲಿ ಕೆಲಸಗಾರ ಆಗಿದ್ದಾರೆ. ಶೇ. 60 ಲಾನುಭವಿಗಳು ಮಧುಮೇಹಿಗಳಾಗಿದ್ದರೆ, ಶೇ. 54 ಅಧಿಕ ರಕ್ತದೊತ್ತಡ, ಶೇ. 33 ಧೂಮಪಾನಿಗಳು ಮತ್ತು ಶೇ. 35 ಕ್ಕಿಂತ ಹೆಚ್ಚು ಮಂದಿ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿದ್ದಾರೆ. ಈ ಸಮಸ್ಯೆಗಳು ಇಂದು ಹಿರಿಯರಿಗೆ ಸೀಮಿತವಾಗದೆ ಕಿರಿಯರು, ಮಹಿಳೆಯರು ಸೇಋಇ ಗ್ರಾಮೀಣ ಪ್ರದೇಶದವರ ಮೇಲೂ ಪರಿಣಾಮ ಬೀರುತ್ತಿದೆ ಎಂದು ವೈದ್ಯರು ತಿಳಿಸಿದರು.

ಆರೋಗ್ಯ ಸಲಹೆ: ಕಾರ್ಯಗಾರದಲ್ಲಿ ಚಿಕಿತ್ಸೆ ಪಡೆದವರಿಗೆ ಬಿಡುಗಡೆ ಹೊಂದುವ ಮುನ್ನ ಸಮಾಲೋಚನೆ ಸಹ ನಡೆಲಸಾಗಿದ್ದು, ರಕ್ತ ತೆಳುಗೊಳಿಸುವ ಔಷಧಿಗಳನ್ನು ನಿಲ್ಲಿಸದಂತೆ ರೋಗಿಗಳಿಗೆ ಸೂಚಿಸಲಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಅತ್ಯುತ್ತಮ ನಿಯಂತ್ರಣದೊಂದಿಗೆ ಕಡಿಮೆ ಕೊಬ್ಬಿನ ಆಹಾರ, ಹೆಚ್ಚು ತರಕಾರಿ ಸೇವನೆ, ದೈನಂದಿನ ಜೀವನದಲ್ಲಿ ನಡಿಗೆ ರೂಢಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net