

ಚನ್ನರಾಯಪಟ್ಟಣ: ಜು. 23ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚನ್ನರಾಯಪಟ್ಟಣ ತಾಲೂಕು ಘಟಕದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಮತ್ತು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ತಾಲೂಕು ಘಟಕದ ಗೌರವಾಧ್ಯಕ್ಷ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಜೂ.23ರ ಭಾನುವಾರದಂದು ಮೇಗಲಕೇರಿ ಅರಳೆಪೇಟೆಯಲ್ಲಿರುವ ಶ್ರೀ ಕಾಡುಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 7 ಗಂಟೆಗೆ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 9.30 ಕ್ಕೆ ಜಗದ್ಗುರು ರೇಣುಕಾಚಾರ್ಯ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯೊಂದಿಗೆ ಸಕಲ ಪುಷ್ಪಾಲಂಕಾರದೊಂದಿಗೆ ಬೆಳ್ಳಿರಥದ ಮೂಲಕ ವಾದ್ಯ ವೈಭವಗಳೊಂದಿಗೆ ನಂದಿಧ್ವಜ, ಕಹಳೆ, ಹಾಗೂ ತಾಲೂಕಿನ ಲಿಂಗಧೀರರ ಸಮೂಹ ನೃತ್ಯ ಹಾಗೂ ಶ್ರೀ ಅಮೃತಲಿಂಗೇಶ್ವರ ಮಹಿಳಾ ಕೋಲಾಟ ಸಂಘ ಅತ್ತಿಹಳ್ಳಿ ಇವರ ಕೋಲಾಟದೊಂದಿಗೆ ಅರಳೆಪೇಟೆ, ಬಾಗೂರು ರಸ್ತೆಯಿಂದ ಬಿ.ಎಂ. ರಸ್ತೆ ಮೂಲಕ ಮೇಗಲಕೇರಿ ಶ್ರೀ ಕಾಡಬಸವೇಶ್ವರ ದೇವಾಲಯ ತಲುಪಲಿದೆ.
ನಂತರ ಸ್ವಾಮಿಗೆ ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಯೋಗ ಏರ್ಪಡಿಸಲಾಗಿದೆ. ನಂತರ 11.30 ಗಂಟೆಗೆ ಧಾರ್ಮಿಕ ಸಮಾರಂಭ ಆರಂಭವಾಗಲಿದ್ದು, ಬೆಂಗಳೂರು ಸರ್ಪಭೂಷಣ ಮಠ, ಅರಕಲಗೂಡು ದೊಡ್ಡಮಠದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನುಗ್ಗೇಹಳ್ಳಿ-ಅಯ್ಯನಹಳ್ಳಿ ಹಿರೇಮಠದ ತಾಲೂಕು ಘಟಕದ ಗೌರವಾಧ್ಯಕ್ಷ ಶ್ರೀ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಡಾ.ಸಿ.ಎನ್.ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ಪರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ನಿವೃತ್ತ ಉಪನ್ಯಾಸಕ ತಗಡೂರು ವೀರಭದ್ರಪ್ಪ ಅವರಿಂದ ಉಪನ್ಯಾಸ ಮತ್ತು ಸಪ್ತಸಾಗರ ಕಲಾನಿಕೇತನ ಮೋನಿಷಾ ಮತ್ತು ತಂಡದಿಂದ ಭರತನಾಟ್ಯ ಏರ್ಪಡಿಸಲಾಗಿದೆ. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ವೀರಶೈವ ಸಮಾಜದವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎನ್.ಪರಮೇಶ್, ಪ್ರಧಾನ ಕಾರ್ಯದರ್ಶಿ ಎ.ಪಿ.ನಂದೀಶ್, ಖಜಾಂಚಿ ಎಂ.ಎಸ್.ಸುರೇಶ್, ನಿರ್ದೇಶಕ ಬಿ.ಸಿ.ಚನ್ನೇಗೌಡ, ಜಿಲ್ಲಾ ಘಟಕದ ಉಪಾಧ್ಯಕ್ಷ ಎ.ಆರ್.ನಾಗರಾಜು, ಪ್ರಧಾನ ಅರ್ಚಕರಾದ ಶಿವನಂದ ಶಾಸ್ತ್ರಿ ಭಾಗವಹಿಸಿದ್ದರು.