

ಬೆಂಗಳೂರು: ಹುಟ್ಟಿದ ಪ್ರತಿಯೊಬ್ಬ ಜೀವಿಯೂ ತನ್ನ ಅಧ್ಯಾತ್ಮ ಸಾಧನೆಯಿಂದ ಭಗವಂತನೊಂದಿಗೆ ಅನುಸಂಧಾನ ಮಾಡಲು ಸಾಧ್ಯವೆಂದು ಸಾರಿದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವು ಪಾಲ್ಗುಣ ಶುದ್ಧ ತ್ರಯೋದಶಿಯಂದಾದರೂ ವರ್ಷಪೂರ್ತಿ ಜಯಂತಿ ಕಾರ್ಯಕ್ರಮ ನಡೆಯುತ್ತವೆ. ಅಂತೆಯೇ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೇ.4 ರಂದು ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಆನಂದರಾವ್ ವೃತ್ತದಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಹಿಸಲಿದ್ದಾರೆ. ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಡೀನ್ ಡಾ.ಎ.ಸಿ.ವಾಲಿಯವರು ಶ್ರೀಜಗದ್ಗುರು ರೇಣುಕರ ಕ್ರಾಂತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ತುಮಕೂರು ವಿವಿ ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಖಂಡಿಮಠ ವೀರಶೈವ ಸಿದ್ಧಾಂತ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಂದು ಬಿಡುಗಡೆಯಾಗಲಿರುವ ಸಿದ್ಧಾಂತ ಶಿಖಾಮಣಿ ಗ್ರಂಥದ ಕುರಿತು ವಿದ್ವಾಂಸರಾದ ಡಾ.ಸಿ.ಶಿವಕುಮಾರಸ್ವಾಮಿ ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ಅತ್ಯುನ್ನತ ಪದವಿ ಪಡೆದ ಪ್ರಾಧ್ಯಾಪಕರಿಗೆ ಹಾಗೂ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಎಸ್ಜೆಆರ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯು.ಎಂ. ಬಸವರಾಜ ತಿಳಿಸಿದ್ದಾರೆ.