ತೃಪ್ತಿ ಇರುವವನೇ ನಿಜವಾದ ಶ್ರೀಮಂತ: ಶ್ರೀ ರಂಭಾಪುರಿ ಜಗದ್ಗುರುಗಳು ಅಭಿಮತ

rambhapuri
Published on

ಬೆಂಗಳೂರು: ಜೀವನದ ಉತ್ಕರ್ಷತೆಗೆ ಧರ್ಮದ ಆದರ್ಶ ಚಿಂತನಗಳು ಅವಶ್ಯಕತೆಯಿದೆ. ಅರಿವು ಜೀವನದ ಶ್ರೇಯಸ್ಸಿಗೆ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ವೀರಶೈವ ಲಿಂಗಾಯತ ಸಂಗಮ ಆಶ್ರಯದಲ್ಲಿ ಜೆ.ಪಿ.ನಗರದ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಧರ್ಮ ಜಾಗೃತಿ’ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸುಜ್ಞಾನ ಮತ್ತು ಸತ್ಪಥದ ಕಡೆಗೆ ಕರೆದೊಯ್ಯುವ ಶಕ್ತಿಯೇ ಶ್ರೀ ಗುರು. ಅಧರ್ಮದಿಂದ ಮನುಷ್ಯನು ತಾತ್ಕಾಲಿಕವಾಗಿ ಮೇಲೇರಿದರೂ ಅಂತಿಮವಾಗಿ ಬುಡ ಸಮೇತ ನಾಶವಾಗುತ್ತಾನೆ. ಬಡವನಾದರೂ ತೃಪ್ತಿ ಇರುವವನೇ ನಿಜವಾದ ಶ್ರೀಮಂತ. ಐಶ್ವರ್ಯದ ಅಡಿಪಾಯ ದುಡಿಮೆಯಲ್ಲಿದೆ ಎಂಬುದನ್ನೂ ಮರೆಯಬಾರದು. ಕೆಟ್ಟವರು ತುಂಬ ಬೆಳೆಯಬಹುದು. ಉಳಿಯಲು ಸಾಧ್ಯವಿಲ್ಲ. ಒಳ್ಳಯವರನ್ನೂ ತುಳಿಯಬಹುದು. ಆದರೆ, ನಾಶಗೊಳಿಸಲು ಸಾಧ್ಯವಿಲ್ಲ. ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನದ ಜ್ಯೋತಿ ಬೆಳಗಿಸಬಲ್ಲಾತನೇ ಶ್ರೀ ಗುರು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವೀರಶೈವ ಧರ್ಮದ ಧಾರ್ಮಿಕ, ಸಾಮಾಜಿಕ ಮೌಲ್ಯಗಳು, ವಿಚಾರಧಾರೆಗಳು ಸರ್ವಕಾಲಕ್ಕೂ ಅನ್ವಯಿಸುತ್ತದೆ ಎಂದು ಶ್ರೀಗಳು ಹೇಳಿದರು.

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿರುವ ವೈಶಾಲ್ಯತೆ ಬೇರೆಯಲ್ಲಿಯೂ ಕಾಣಲಾಗದು. ಈ ನಾಡಿನ ಋಷಿಮುನಿಗಳು, ಆಚಾರ್ಯರ ಬೋಧನೆಯಿಂದಾಗಿ ನಾವೆಲ್ಲರೂ ಸುಖಿಗಳಾಗಿ ಬಾಳುತ್ತಿದ್ದೇವೆ. ಉತ್ತಮ ಸಮಾಜ ನಿರ್ಮಾಣಕ್ಕೆ ಧರ್ಮ ಜಾಗೃತಿ ಕಾರ್ಯಕ್ರಮ ತುಂಬ ಅಗತ್ಯವಿದೆ ಎಂದರು.

ನೆಟ್ಟ ಸಸಿಗಳು ಮರವಾಗಿ ನಮಗೆ ಹತ್ತಿರವಾಗುತ್ತವೆ. ಆದರೆ, ಮನುಷ್ಯರು ಬೆಳೆಯುತ್ತಿದ್ದಂತೆ ಅವರ ಮನಸ್ಸುಗಳು ದೂರವಾಗುತ್ತವೆ. ಇದರಿಂದಾಗಿ ಸಮಾಜದಲ್ಲಿ ಸದ್ಭಾವ ಸಾಮರಸ್ಯ ಕಾಣಲು ಸಾಧ್ಯವಿಲ್ಲದಂತಾಗಿದೆ ಎಂದು ಎಡೆಯೂರು ರೇಣುಕ ಶಿವಾಚರ್ಯ ತಿಳಿಸಿದರು. ಅಧಿಕ ಶ್ರಾವಣ ನಿಮಿತ್ತ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ರಾಜಾಪುರ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ವೀರಶೈವ ಲಿಂಗಾಯತ ಸಂಗದ ಅಧ್ಯಕ್ಷ ಚಂದ್ರಶೇಖರಗೌಡರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net