ಇಗ್ಗುತ್ತಪ್ಪ ದೇಗುಲದಲ್ಲಿ ರುದ್ರಾಭಿಷೇಕ

8-npk-2
Published on

ನಾಪೋಕ್ಲು: ಸಮೀಪದ ಪೇರೂರು ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶುಕ್ರವಾರ ಶಿವರಾತ್ರಿ ಹಬ್ಬದ ಅಂಗವಾಗಿ ರುದ್ರಾಭಿಷೇಕ ಮತ್ತು ಮಹಾಪೂಜೆ ಜರುಗಿತು.

ಭಕ್ತರು ಬೆಳಗ್ಗೆಯಿಂದಲೇ ದೇವಾಲಯಕ್ಕೆ ತೆರಳಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಇದೇ ವೇಳೆ ತುಲಾಭಾರ ಸೇವೆ ನಡೆಸಲಾಯಿತು. ಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಉತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ನಡೆಯಿತು. ಬಳಿಕ ಇಗ್ಗುತ್ತಪ್ಪ ದೇವರ ಉತ್ಸವ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ದೇವರ ನೃತ್ಯಬಲಿ ವೀಕ್ಷಿಸಿದರು. ದೇವಾಲಯದ ಅರ್ಚಕ ಗಿರೀಶ್, ತಂತ್ರಿ ಗೋಪಾಲಕೃಷ್ಣ ಅವರು ರುದ್ರಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಚ್ಚುರ ರವೀಂದ್ರ ಮಾತನಾಡಿ, ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಈ ವರ್ಷ 21 ತುಲಾಭಾರ ಸೇವೆಗಳು, ರುದ್ರಾಭಿಷೇಕ , ಮಹಾಪೂಜೆ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು . ತುಲಾಭಾರ ಸೇವೆ ಹಾಗೂ ಹರಕೆ ಸಲ್ಲಿಸಿದವರಿಗೆ ತಕ್ಕ ಮುಖ್ಯಸ್ಥರು ರಾತ್ರಿ ಮಂತ್ರಾಕ್ಷತೆ ವಿತರಿಸಲಿದ್ದು, ಬಳಿಕ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ ಎಂದರು. ಕಾರ್ಯದರ್ಶಿ ಅಪ್ಪಚ್ಚಿರ ಪೊನ್ನಪ್ಪ , ದೇವತಕ್ಕರಾದ ಮಚ್ಚುರ ತಮ್ಮಯ್ಯ , ನಾಡುತಕ್ಕರಾದ ಕೆ.ಪಿ.ಪೊನ್ನಮಯ್ಯ, ತೋಳಂಡ ದೇವಯ್ಯ, ಮೇಕ್ ಮಣಿಯಂಡ ಈರಪ್ಪ , ಬೊಟ್ಟೋಳಂಡ ಪುವಯ್ಯ , ಪೊನ್ನಣಿ , ಆನೆಯಡ ರಾಮಯ್ಯ , ತಾಪಂಡ ವರುಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net