

ಹಾಸನ: ವಿಶ್ವ ಹಿಂದು ಪರಿಷತ್, ಬಜರಂಗ ದಳದ ವತಿಯಿಂದ ಹನುಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ಗುರುವಾರ ಸಂಜೆ ನಗರದ ಕುವೆಂಪು ನಗರದ ಶಕ್ತಿ ಗಣಪತಿ ದೇವಸ್ಥಾನದಿಂದ ಹನುಮ ಸಂಕೀರ್ತನಾ ಯಾತ್ರೆ ಯಶಸ್ವಿಯಾಗಿ ನಡೆಯಿತು.
ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಅವರು ಹನುಮ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮ ಮಹೋತ್ಸವದ ಅಂಗವಾಗಿ ಬುಧವಾರದಿಂದ ಸರಣಿ ಕಾರ್ಯಕ್ರಮ ನಡೆಯುತ್ತಿದೆ. ಬುಧವಾರ ಶ್ರೀ ರಾಮನ ಹೋಮ ಮಾಡಲಾಗಿದೆ. ಇದರ ಉದ್ದೇಶ ಸ್ತ್ರೀ ಶಕ್ತಿಯನ್ನು ಜಾಗೃತಿಗೊಳಿಸುವುದಾಗಿದೆ. ರಾಷ್ಟ್ರದ ಸವಾಲುಗಳ ಬಗ್ಗೆ ಮನವರಿಕೆ ಮಾಡಿ ಕುಟುಂಬ ಅವಿಭಕ್ತದದಲ್ಲಿದೆ ಎಂಬುದರ ಬಗ್ಗೆ ನೆನಪಿಸುವ ಕೆಲಸ ನಾವು ಮಾಡುತ್ತಿದ್ದೇವೆ. ನಾವು ಧಾರ್ಮಿಕ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕಾಗಿದೆ. ನಾವೆಲ್ಲರೂ ಹಿಂದು ಸಮಾಜದ ಜಾಗೃತಿಗೆ ಹಾಗೂ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿ, ಶುಕ್ರವಾರ ಬೈಕ್ ರ‌್ಯಾಲಿ, ಶನಿವಾರ ಬೃಹತ್ ಶೋಭಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಹಾಸನದ ಭಜನಾ ಮಂಡಳಿಗಳು ಹಾಗೂ ಮಾತೆಯರು ಮೆರವಣಿಗೆಯಲ್ಲಿ ದಾರಿಯಲ್ಲಿ ಭಜನೆ ಮಾಡುತ್ತಾ ಹನುಮ ಧ್ಯಾನ ಮಾಡುತ್ತಾ ಸಾಗಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಈ ಸಂಕೀರ್ತನಾ ಯಾತ್ರೆ ಮೆರವಣಿಗೆಯು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ಹಾಸನ ವಿಭಾಗ ಕಾರ್ಯದರ್ಶಿ ಮಹಿಪಾಲ್, ಉಪಾಧ್ಯಕ್ಷ ಸಾಯಿಪ್ರಸಾದ್, ಜಿಲ್ಲಾ ಕಾರ್ಯದರ್ಶಿ ವಿಕಾಸ್, ಸಹ ಕಾರ್ಯದರ್ಶಿ ಮಂಜು, ಬಜರಂಗ ದಳ ಸಂಯೋಜಕ ಅಭಿಷೇಕ್, ಪ್ರಚಾರ - ಪ್ರಸಾರ ಪ್ರಮುಖ್ ಪ್ರಣವ ಭಾರಧ್ವಾಜ, ಪವನ್, ದಿನೇಶ್ ಸಿಂಗ್, ಬಾಲಸುಬ್ರಹ್ಮಣ್ಯ ಪ್ರಸಾದ್, ಟಿ.ಎಚ್.ಚಂದ್ರಶೇಖರ್, ಹನುಮಂತೇಗೌಡ, ಹರಿಹರಪುರ ಶ್ರೀಧರ್ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.