

ಅರಸೀಕೆರೆ ಗ್ರಾಮಾಂತರ : ತಾಲೂಕಿನ ಬಾಣಾವರ ಹೋಬಳಿಯ ಸುಂಕದಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ಅವರ ದಸರಾ ಮಹೋತ್ಸವ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ಅವರನ್ನು ಬೆಳ್ಳಿ ಅಡ್ಡ ಪಲ್ಲಕ್ಕಿಯಲ್ಲಿ ಕೂರಿಸಿ ಇತರೆ ದೇವರುಗಳದ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ, ಕೆ.ಜೆ.ಅಗ್ರಹಾರದ ಕೋಡಮ್ಮ, ಹೊನ್ನವಳ್ಳಿ ಭೈರವೇಶ್ವರ ಸ್ವಾಮಿ, ಕುರುವಂಕದ ಕೆಂಗಲ್ ಸಿದ್ದೇಶ್ವರಸ್ವಾಮಿ ಮೂರ್ತಿಯನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಶ್ರೀ ಕ್ಷೇತ್ರ ಕೇದಿಗೆ ಮಠದ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಾಯಿಗೆರೆ ಮಲ್ಲೇಶ್ವರ ವೀರಗಾಸೆ ತಂಡದ ಲೋಕೇಶ್ ಅವರ ವೀರಗಾಸೆ, ಹಾರನಹಳ್ಳಿ ಕರಡೆ ವಾದ್ಯದೊಂದಿಗೆ ರಾಜಬೀದಿಯಲ್ಲಿ ಮೆರವಣಿಗೆ ಸಾಗಿತು. ಗ್ರಾಮದ ಈಶ್ವರ ದೇವಾಲಯದ ಮುಂಭಾಗದಲ್ಲಿ ಇರುವ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಪ್ರದಾಯದಂತೆ ಅಂಬು ಹೊಡೆಯುವ ಕಾರ್ಯಕ್ರಮ ನಡೆಯಿತು. ನಂತರ ವಿಶೇಷವಾಗಿ ಬಾಣ, ಬಿರುಸು, ಮಂದು, ಗುಂಡು ಪ್ರದರ್ಶನ ನಡೆಯಿತು ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು.