ಯೋಗವನ್ನು ಯಜ್ಞವಾಗಿಸಿ ಸಾಧನೆ ಮಾಡೋಣ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶಯ

20sirsi5- swarnavalli shree
Published on

ಶಿರಸಿ: ಯೋಗವನ್ನು ಒಂದು ಯಜ್ಞವಾಗಿಸಿ ಸಾಧನೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಮಠದ ಮಹಾ ಪಾಠಶಾಲೆ, ಸೋಂದಾ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಗುರುವಾರ ಯೋಗೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಜ್ಞಗಳ ಸಾಲಿನಲ್ಲಿ ಯೋಗವೂ ಒಂದು ಯಜ್ಞ ಎಂಬ ಉಲ್ಲೇಖವಿದೆ. ಇದನ್ನು ನಾವು ಯಜ್ಞವನ್ನಾಗಿ ಮಾಡಬೇಕು. ಯೋಗವನ್ನು ಹೀಗೆ ಮಾಡಬೇಕು ಎಂಬ ಕ್ರಮದಂತೆ ಮಾಡಬೇಕು. ಹಲವು ಕ್ರಮ ಇದ್ದರೂ ಯಾವುದಾದರೂ ಒಂದು ಕ್ರಮ ನಾವು ಪಾಲಿಸಬೇಕು, ಯಾವುದೇ ಆಸನ, ಪ್ರಾಣಾಯಾಮ ಮನಸ್ಸು ಕೊಟ್ಟು ಮಾಡಬೇಕು. ಯೋಗದ ಕೊನೆಯಲ್ಲಿ ದೇವರಿಗೆ ಈಶ್ವರಾರ್ಪಣೆ ದೃಷ್ಟಿಯಲ್ಲಿ ಅರ್ಪಣೆ ಮಾಡಬೇಕು. ಈ ಅಂಶಗಳನ್ನು ಯೋಗದಲ್ಲಿ ಆಳವಡಿಸಿಕೊಂಡರೆ ಯೋಗವೂ ಒಂದು ಯಜ್ಞವಾಗುತ್ತದೆ. ಅದರಿಂದ ಆರೋಗ್ಯದ ಜತೆ ಆಧ್ಯಾತ್ಮಿಕ ಪ್ರಯೋಜನ ಇದೆ. ಚಿತ್ತದ ಶುದ್ಧಿ, ಜ್ಞಾನ ಪ್ರಾಪ್ತಿಗಳಿವೆ ಎಂದರು.
ಯೋಗ ಸ್ವರೂಪಿ ಪರಮಾತ್ಮ. ನಿದ್ರೆಯ, ಉಸಿರಾಟದದಲ್ಲಿ ಹಿಡಿತ ಯೋಗ ಸಾಧಕರಿಗೆ ಸಿಗುತ್ತದೆ. ಸತತ ಸಂತೃಪ್ತ ಇರುತ್ತದೆ. ಇಂದ್ರೀಯ ಸಮೂಹ ಮೇಲೆ ಹತೋಟಿ ಇರುತ್ತದೆ. ಯೋಗದ ಅಂತಿಮ ಪ್ರಯೋಜನ ಎಂದರೆ ಪರಮಾತ್ಮನ ಜ್ಯೋತಿ ಕಾಣುತ್ತದೆ ಎಂದ ಶ್ರೀಗಳು, ಯೋಗವನ್ನು ಯೋಗ ದಿನಾಚರಣೆ ದಿನ ಮಾತ್ರ ಮಾಡಬಾರದು. ಪ್ರತಿ ದಿನವೂ ಕ್ರಮ ಬದ್ಧವಾಗಿ ಯೋಗಾನುಷ್ಠಾನ ಮಾಡಬೇಕು ಎಂದರು.
ಈ ವೇಳೆ ಶ್ರೀಮಠದ ಕಿರಿಯ ಯತಿಗಳಾದ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಠದ ಶಿಷ್ಯರು, ಸಾರ್ವಜನಿಕರು, ಪಾಠಶಾಲೆಯ ಸಮಸ್ತರು ಯೋಗೋತ್ಸವದಲ್ಲಿ ಭಾಗವಹಿಸಿದ್ದರು. ರಘುರಾಮ ಹೆಗಡೆ ಯೋಗ ಹೇಳಿಕೊಟ್ಟರು.

ಯೋಗವೆಂದರೆ ಒಂದಾಗುವ ಎಂಬ ಅರ್ಥವೂ ಇದೆ. ಯೋಗದ ಮೂಲಕ ವಿಶ್ವವೂ ಒಂದಾಗುತ್ತಿದೆ. ಸಮಸ್ತ ವಿಶ್ವವನ್ನು ಒಂದಾಗಿ ಕಾಣೋಣ.| ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net