

Best School : ಕನ್ನಡ ಗೆಳೆಯರ ಬಳಗವು ಪ್ರತಿ ವರ್ಷ ಉತ್ತಮ ನಿರ್ವಹಣೆ ತೋರಿರುವ ಕನ್ನಡ ಮಾಧ್ಯಮ ಶಾಲೆಗೆ ನೀಡುವ 'ಉತ್ತಮ ಶಾಲೆ’ ಬಹುಮಾನಕ್ಕೆ ತುಮಕೂರು ಜಿಲ್ಲೆಯ ಹೆಬ್ಬೂರಿನ ಕನ್ನಡ ಮಾಧ್ಯಮದ ಅನುದಾನಿತ ಶ್ರೀಗಣಪತಿ ಪ್ರೌಢಶಾಲೆಯನ್ನು (75 ವರ್ಷಆಚರಿಸುತ್ತಿದೆ) ಆಯ್ಕೆ ಮಾಡಲಾಗಿದೆ.
ಈ ಬಹುಮಾನವನ್ನು ನಾಡಿನ ಗಣ್ಯ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರ ಶತಮಾನೋತ್ಸವದ ನೆನಪಿನಲ್ಲಿ ನೀಡಲಾಗುತ್ತಿದೆ. ಹತ್ತು ಸಾವಿರ ರೂಪಾಯಿಗಳನ್ನು ಬಹುಮಾನದ ಮೊತ್ತವಾಗಿ ನೀಡಲಾಗುತ್ತದೆ.
ಈ ಶಾಲೆಯಲ್ಲಿ ಸತವಾಗಿ 5 ವರ್ಷದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 90% ತೇರ್ಗಡೆ ಹೊಂದಿದ್ದಾರೆ. ಶಾಲೆಯ ವಿಶೇಷ ಅಂದರೆ, ಈ ವಿದ್ಯಾಸಂಸ್ಥೆಯಲ್ಲಿ 8 ರಿಂದ 12ನೇ ತರಗತಿಯವರೆಗೆ 210 ವಿದ್ಯಾರ್ಥಿಗಳಿದ್ದಾರೆ. ಪಿಯುಸಿ ಮಾಧ್ಯಮ ಕೂಡ ಕನ್ನಡವಾಗಿದೆ.
ಶಾಲೆಯಲ್ಲಿ 8ನೇ ತರಗತಿಯಿಂದ ಕೌಶಲ ತರಬೇತಿಯನ್ನು ನೀಡುತ್ತಿದ್ದು ಉತ್ತಮ ಕಾರ್ಯಾಗಾರ (Workshop), ವಿಜ್ಞಾನ, ಕಂಪ್ಯೂಟರ್ ಪ್ರಯೋಗಾಲಯಗಳು, ಕ್ರೀಡಾ ಕೊಠಡಿ, ಸಭಾಂಗಣ ಎಲ್ಲವೂ ವ್ಯವಸ್ಥಿತವಾಗಿವೆ. ಶಾಲೆಯ ಕಟ್ಟಡವನ್ನು ಸ್ವಚ್ಛವಾಗಿರಿಸಿದ್ದಾರೆ. ಶಾಲೆಯು ವಿಶಾಲವಾದ ಜಾಗದಲ್ಲಿದೆ. ಹೀಗೆ ಹಲವು ವಿಶೇಷಗಳಲ್ಲಿ ಈ ಶಾಲೆಯನ್ನು ಉತ್ತಮ ನೆಲೆಯಲ್ಲಿ ಕಟ್ಟುತ್ತಿರುವುದು ಶ್ಲಾಘನೀಯವಾದದ್ದು ಎಂದು ಕುದ್ದೂ ಭೇಟಿ ನೀಡಿದ್ದ ಆಯ್ಕೆ ಸಮಿತಿಯು ಅಭಿಪ್ರಾಯ ಪಟ್ಟಿದೆ.
03-12-2024ರಂದು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ನಾಡೋಜ ಡಾ. ವುಡೇ ಪಿ. ಕೃಷ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಾ.ಎಲ್. ಹನುಮಂತಯ್ಯ, ಡಾ.ಟಿ.ಎಸ್. ನಾಗಭರಣ ಅವರು ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕ ಬಹುಮಾನ ಪ್ರದಾನ ಮಾಡುವರು. ಅದೇ ಸಮಾರಂಭದಲ್ಲಿ ತುಮಕೂರು ಜಿಲ್ಲೆ ಹೆಬ್ಬೂರಿನ ಶ್ರೀ ಗಣಪತಿ ಪ್ರೌಢ ಶಾಲೆಗೆ(ಸರ್ಕಾರದ ಅನುದಾನಿತ ಶಾಲೆ) 2024ನೇ ಸಾಲಿನ ಉತ್ತಮ ಶಾಲೆ ಬಹುಮಾನ ನೀಡಲಾಗುವುದು.