

ಲಕ್ಷ್ಮೇಶ್ವರ: ಸಮೀಪದ ಗುಲಗಂಜಿಕೊಪ್ಪ ಗ್ರಾಮ ವ್ಯಾಪ್ತಿಯ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸೆ. 11ರಂದು ನೆರವೇರಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಪ್ರಾತಃಕಾಲ ದೇವಸ್ಥಾನದಲ್ಲಿ ಗಣಪತಿ ಪೂಜೆ, ಹೋಮ-ಹವನಾದಿಗಳು, ಶ್ರೀ ದುಂಡಿಬಸವೇಶ್ವರನಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಧಾರವಾಡ ಮತ್ತು ಗದಗನ ವೈದ್ಯಕೀಯ ಸಂಸ್ಥೆಗಳಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಧರ್ಮಸಭೆ ನೊಣವಿನಕೇರಿ ಕಾಡಸಿದ್ಧೇಶ್ವರಮಠ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಮತ್ತು ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನೆರವೇರಲಿದೆ. ಗಂಜಿಗಟ್ಟಿಯ ಶ್ರೀ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಲಕ್ಷ್ಮೇಶ್ವರದ ಮಳೆಮಲ್ಲಿಕಾರ್ಜುನ ಸ್ವಾಮಿಗಳು, ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಸೇರಿ ಹರಗುರುಚರ ಮೂರ್ತಿಗಳು ಪಾಲ್ಗೊಳ್ಳುವರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಕೊಟಗಿ ಅಧ್ಯಕ್ಷತೆ ವಹಿಸುವರು.