

ನರೇಗಲ್ಲ: ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಅಧಿಕಾರಿಗಳ ಕ್ರಮವನ್ನು ಪಟ್ಟಣದ ಶ್ರೀ ದತ್ತಭಕ್ತ ಮಂಡಳಿ ಖಂಡಿಸಿದೆ.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಕರೆಯಲಾದ ಸಭೆಯಲ್ಲಿ ಮಾತನಾಡಿದ ಮಂಡಳಿಯ ಕಾರ್ಯದರ್ಶಿ ರಘುನಾಥ ಕೊಂಡಿ, ಯಜ್ಞೋಪವೀತವು ಬ್ರಾಹ್ಮಣರಿಗೆ ಅತ್ಯಂತ ಪವಿತ್ರವಾದುದು. ಒಮ್ಮೆ ಉಪನಯನದ ಸಮಯದಲ್ಲಿ ಧರಿಸಿದ ಜನಿವಾರವನ್ನು ಆ ವ್ಯಕ್ತಿ ತನ್ನ ಕೊನೆಯ ಉಸಿರಿರುವವರೆಗೂ ಧರಿಸುತ್ತಾನೆ. ಯಜ್ಞೋಪವೀತಕ್ಕೆ ಅಂತಹ ಪವಿತ್ರ ಸ್ಥಾನವಿದೆ. ಯಾವ ಕಾರಣಕ್ಕೂ ತೆಗೆಯದ ಯಜ್ಞೋಪವೀತವನ್ನು ಪರೀಕ್ಷಾ ಸಿಬ್ಬಂದಿ ತೆಗೆಸಲು ಮುಂದಾಗಿದ್ದು ಅತ್ಯಂತ ಖಂಡನೀಯ ಸಂಗತಿ ಎಂದರು.
ಸಮಾಜದ ಹಿರಿಯರಾದ ಡಾ. ಜಿ.ಕೆ. ಕಾಳೆ ಮಾತನಾಡಿ, ಜನಿವಾರದಿಂದ ಸಿಇಟಿ ಪರೀಕ್ಷೆಗೆ ಏನು ತೊಂದರೆಯಾಗುತ್ತಿತ್ತು ಎಂಬುದು ಯಾರಿಗೂ ಅರ್ಥವಾಗದ ಸಂಗತಿ. ವಿದ್ಯಾರ್ಥಿಗಳ ಕೊರಳಲ್ಲಿನ ಜನಿವಾರವನ್ನು ತೆಗೆಸಬೇಕೆಂದು ರಕ್ಷಣಾ ಸಿಬ್ಬಂದಿಗೆ ಹೇಳಿರೋದು ಯಾರು? ಎಂಬುದು ಎಲ್ಲರಿಗೂ ತಿಳಿಯಬೇಕಿದೆ. ಶಿವಮೊಗ್ಗ ಮತ್ತು ಬೀದರ ಜಿಲ್ಲೆಗಳಲ್ಲಿ ನಡೆದಿರುವ ಈ ಕೃತ್ಯ ಅತ್ಯಂತ ಹೇಯವಾದುದು. ಇಂತಹ ಆದೇಶ ಮಾಡಿದವರನ್ನು ಮೊದಲು ಪತ್ತೆ ಹಚ್ಚಿ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಶ್ರೀಪಾಧಭಟ್ಟ ಜೋಷಿ ಮಾತನಾಡಿ, ಯಜ್ಞೋಪವೀತ ತೆಗೆದಿಟ್ಟು ಬನ್ನಿ ಎಂದು ಹೇಳುವವರು ನಾಳೆ ಮತ್ತೊಂದನ್ನು ತೆಗೆದಿಟ್ಟು ಬನ್ನಿ ಎಂದು ಹೇಳುವುದಿಲ್ಲ ಎನ್ನುವ ಗ್ಯಾರಂಟಿ ಏನಿದೆ? ಇಷ್ಟು ವರ್ಷಗಳ ಕಾಲ ನಡೆದಿರುವ ಪರೀಕ್ಷಾ ಸಮಯದಲ್ಲಿ ಇಲ್ಲದ ಹೊಸ ನಿಯಮ ಈಗ್ಯಾಕೆ ಜಾರಿಗೆ ಬಂತು? ಇದನ್ನು ನರೇಗಲ್ಲದ ಬ್ರಹ್ಮ ಸಮಾಜ ಬಲವಾಗಿ ಖಂಡಿಸುತ್ತದೆ ಎಂದರು.
ಅಧ್ಯಕ್ಷ ನಾಗರಾಜ ಗ್ರಾಮಪುರೋಹಿತ ಮಾತನಾಡಿ, ಈ ಘಟನೆ ಯಜ್ಞೋಪವೀತ ಧರಿಸುವ ಎಲ್ಲ ಸಮಾಜಗಳಿಗೆ ಸರ್ಕಾರ ಮಾಡಿದ ಅನ್ಯಾಯವಾಗಿದೆ. ಇಂತಹ ಕಾರ್ಯಕ್ಕೆ ಆದೇಶ ಮಾಡಿದವನನ್ನು, ಈ ಕಾರ್ಯ ಎಸಗಿದವರನ್ನು ಕೂಡಲೆ ಸೇವೆಯಿಂದ ವಜಾ ಮಾಡಬೇಕು ಎಂದರು.
ಎ. ಜಿ. ಕುಲಕರ್ಣಿ, ಮಂಜುನಾಥ ಗ್ರಾಮಪುರೋಹಿತ, ಅರುಣ ಕುಲಕರ್ಣಿ, ಎಸ್. ಎಚ್. ಕುಲಕರ್ಣಿ, ಆದರ್ಶ ಕುಲಕರ್ಣಿ, ಆನಂದ ಕುಲಕರ್ಣಿ, ಕೆ. ಬಿ. ದೇಸಾಯಿ, ಜಗನ್ನಾಥ ಸೂರಭಟ್ಟನವರ ಇದ್ದರು.