

ಸಂಗಮೇಶ ಅಂಗಡಿ ಮಮದಾಪುರ
ಗೋಕಾಕ ತಾಲೂಕಿನ ಮಮತೆಯ ಮಮದಾಪುರ ಗ್ರಾಮದ ಆರಾಧ್ಯದೈವ ಶ್ರೀ ಚರಮೂರ್ತಿಶ್ವರ ಮಠ ಐತಿಹಾಸಿಕವಾಗಿದೆ. ಚರಮೂರ್ತಿಶ್ವರ ಜಾತ್ರಾ ಮಹೋತ್ಸವ ಮೇ 4ರಂದು ಸಂಭ್ರಮದಿಂದ ಜರುಗಲಿದೆ. ಇದಕ್ಕಾಗಿ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿವೆ.
ಚರಮೂರ್ತಿಶ್ವರ ಸ್ವಾಮೀಜಿ ಪುತ್ರ ಡಾ. ಸಿದ್ದಲಿಂಗ ದೇವರು ಮಠದ ಜನಪರ ಕಾರ್ಯ ಮುನ್ನಡೆಸುತ್ತಿದ್ದಾರೆ. ಶ್ರೀಮಠ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಗೆ ಜತೆಗೆ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಮಠದಲ್ಲಿ ಆದಿಕಾಲದಿಂದಲೂ ವರ್ಷವೀಡಿ ಪ್ರತಿದಿನ ಸಂಜೆ ಪ್ರಾರ್ಥನೆ ಹಾಗೂ ಸತ್ಸಂಗ ಜರುಗುತ್ತದೆ. ಪ್ರತಿ ಸೋಮವಾರ ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಮಹಾಪ್ರಸಾದ ನೆರವೇರುತ್ತದೆ. ಮಠದಲ್ಲಿನ ಬನ್ನಿಮಹಾಕಾಳಿಗೆ ವೃಕ್ಷಕ್ಕೆ ಮಹಾನವಮಿಯ 9 ದಿನ ಗ್ರಾಮದ ಎಲ್ಲ ಮಾತೆಯರು ಶ್ರದ್ಧಾ, ಭಕ್ತಿಯಿಂದ ಆರಾಧಿಸಿ ವ್ರತ ಕೈಗೊಳ್ಳುವುದರಿಂದ ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸದ ಕೊನೆಯ ಸೋಮವಾರ ನಿರಂತರ ಸಪ್ತಾಹ, ಭಜನೆ ಕಾರ್ಯಕ್ರಮ ನಡೆಯುತ್ತದೆ. ಗ್ರಾಮದ ಎಲ್ಲ ಸಮುದಾಯವರು ಶಿವನಾಮ ಸ್ಮರಣೆ, ಭಜನೆ ನಡೆಸಿಕೊಡುತ್ತಾರೆ. ಪ್ರತಿ ವರ್ಷ ಆಗಿ ಹುಣ್ಣಿಮೆ ಪೂರ್ವದಲ್ಲಿ ಮಠದ ಜಾತ್ರೆ ನಡೆಯುತ್ತದೆ. ಜಾತ್ರೆ ಅಂಗವಾಗಿ ತಿಂಗಳು ಕಾಲ ಆಧ್ಯಾತ್ಮಿಕ ಪ್ರವಚನ, ದಾಸೋಹ ಜರುಗುತ್ತದೆ. ಶ್ರೀಮಠ ರಾಜ್ಯದೆಲ್ಲೆಡೆ ಅಪಾರ ಭಕ್ತರನ್ನು ಹೊಂದಿದೆ.
ವಿವಿಧ ಕಾರ್ಯಕ್ರಮ: ಗ್ರಾಮದ ಚರಮೂರ್ತಿಶ್ವರ ಮಠಲ್ಲಿ ಏ.4 ರಂದು ರಾತ್ರಿ 9 ಗಂಟೆಗೆ ಹಡಗಿನಾಳ ಮಲ್ಲೇಶ್ ಶರಣರು ನೀಡುತ್ತಿರುವ ಆಧ್ಯಾತ್ಮಿಕ ಪ್ರವಚನ ಮಂಗಲಗೊಳ್ಳಲಿದೆ. ಏ.5ರಂದು ಚರರ್ಮೂರ್ತಿಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ಇದೇ ವೇಳೆ ಷಟ್‌ಸ್ಥಲ ಧ್ವಜಾರೋಹಣ, ಶ್ರೀ ದಾರುಕಾಚಾರ್ಯರ ಜಯಂತಿ ಜರುಗಲಿದೆ. ನಿಜಗುಣ ಸ್ವಾಮೀಜಿ ಪ್ರವಚನ, ಅನ್ನಪ್ರಸಾದ, ರಾತ್ರಿ ಭಜನೆ, ಡೊಳ್ಳಿನ ಪದ ಹಾಗೂ ಶಿವನಾಮ ಸ್ಮರಣೆ ಜರುಗಲಿವೆ. ಏ.6 ರಂದು ಎಲ್ಲ ದೇವರ ಪಲ್ಲಕ್ಕಿಗಳ ಬೀಳ್ಕೊಡುಗೆ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು. ಹರಳಿಕಟ್ಟಿ ನಿಜಗುಣ ಸ್ವಾಮೀಜಿ, ಗೋಕಾಕದ ಮುರುಘ ರಾಜೇಂದ್ರ ಸ್ವಾಮೀಜಿ, ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗುರು ಚಕ್ರವರ್ತಿ ಶಿವಯ್ಯ ಸ್ವಾಮೀಜಿ, ಚರಮೂರ್ತಿಶ್ವರ ಸ್ವಾಮೀಜಿ, ಶಾಂತಾರೂಢ ಸ್ವಾಮೀಜಿ, ಡಾ. ಸಿದ್ದಲಿಂಗ ದೇವರು ಪಾಲ್ಗೊಳ್ಳಲಿದ್ದಾರೆ.
ಚರಮೂರ್ತಿಶ್ವರ ಮಹಿಮೆ ಅಪಾರ. ಶ್ರೀ ಮಠ ಭಕ್ತರಿಗೆ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಮಹಾತ್ಮರಿಂದ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಂಡು ಅಜ್ಞಾನದಿಂದ ಸುಜ್ಞಾನದ ಕಡೆಗೆ ಜನರನ್ನು ಕೊಂಡಯ್ಯುತ್ತಿದೆ. ಭಕ್ತರ ಸತ್ಕಾರ್ಯಗಳಲ್ಲಿ ಪಾಲ್ಗೊಂಡು ಗುರು ಕೃಪೆಗೆ ಪಾತ್ರರಾಗೋಣ. ಶಂಕರ ಖನಗಾಂವ ವ್ಯಾಪಾರಸ್ಥರು