

ಹಿರಿಕರ ರವಿ, ಸೋಮವಾರಪೇಟೆ
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಶ್ರೀಚನ್ನಿಗರಾಯ ದೇವಾಲಯ ಹಾಗೂ ಬಂಡಿಯಮ್ಮ ದೇವಾಲಯ ರೈತನ ಪಾಲಿನ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದೆ.
ಯಡವಾರೆ ಗ್ರಾಮದಲ್ಲಿ ನೆಲೆನಿಂತಿರುವ ವಿಷ್ಣುವಿನ ಪ್ರತಿರೂಪ ಶ್ರೀ ಚನ್ನಿಗರಾಯ ದೇವರಿಗೆ 500 ವರ್ಷಗಳ ಇತಿಹಾಸವಿದ್ದು, ಕಳೆದ ಅನೇಕ ದಶಕಗಳಿಂದ ಗ್ರಾಮದಲ್ಲಿದ್ದ ಚಿಕ್ಕಗುಡಿಯಲ್ಲಿ ಪೂಜಿಸಲಾಗುತ್ತಿತ್ತು. ಹಿಂದೆ ಜೈನರು ಪೂಜೆ ಮಾಡುತ್ತಿದ್ದರು. 1932ರಿಂದ ಈಚೆಗೆ ಯಡವಾರೆ ಗ್ರಾಮದಲ್ಲಿ ವಾಸವಿದ್ದ ರೈತ ಕುಟುಂಬಗಳು ಪೂಜೆ ಮಾಡುತ್ತಿದ್ದರು.
ಬಾರನಾ, ಮೂಲೆಮಜಲು, ಮಚ್ಚಂಡ, ಕೂಡಕಂಡಿ, ಕಾಳೇರಮ್ಮನ, ಕಾಸ್ಪಾಡಿ, ಮಿತ್ತಡ್ಕ, ಬಲ್ಲಡ ಮರೂರು ಕುಟುಂಬದವರು, ಕೆಲ ದಶಕಗಳಿಂದ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತ ಬಂದಿದ್ದಾರೆ.
ಕೊಡಗು ಜಿಲ್ಲೆಯ ಮಟ್ಟಿಗೆ ಶ್ರೀ ಚನ್ನಿಗರಾಯ ದೇವಾಲಯ ಯಡವಾರೆ ಗ್ರಾಮದಲ್ಲಿ ಮಾತ್ರ ಕಾಣ ಸಿಗುತ್ತದೆ. 2016ರಲ್ಲಿ ಕದ್ರಿ ಪಂಡಿತರೊಂದಿಗೆ ಅಷ್ಟಮಂಗಲ ಪ್ರಶ್ನೆ ಹಾಕಿದ
ಸಂದರ್ಭ ವಿಗ್ರಹ ಬದಲಾವಣೆಯ ಸಲಹೆ ಪಡೆದು ಧಾರ್ಮಿಕ ವಿಧಿವಿಧಾನದಂತೆ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಾಣವಾಗಿ 2022ರಲ್ಲಿ ಪ್ರತಿಷ್ಠಾಪನೆ ನಡೆದಿದೆ. ದೇವಾಲಯದ ಮುಂದುವರಿದ ಕಾಮಗಾರಿ ನಡೆಯುತ್ತಿದ್ದು, ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ಪೂರ್ಣಗೊಳ್ಳಲಿದೆ ಎಂದು ಗ್ರಾಮಸ್ಥರು ಹೇಳಿದರು.
ಯಡವಾರೆ ಒಂದು ಕೃಷಿ ಪ್ರಧಾನ ಗ್ರಾಮವಾಗಿದ್ದು, ಹಿಂದೆ ಭತ್ತ ಪ್ರಮುಖ ಬೆಳೆಯಾಗಿತ್ತು. ಯಡವನಾಡು ಮೀಸಲು ಅರಣ್ಯದಂಚಿನ ಗ್ರಾಮವಾಗಿರುವುದರಿಂದ ವನ್ಯಮೃಗಗಳಿಂದ ಕೃಷಿ ಫಸಲು, ದನಕರುಗಳು ಹಾಗೂ ಮನುಷ್ಯರನ್ನು ಶ್ರೀ ಚನ್ನಿಗರಾಯ ಹಾಗೂ ಅವರ ತಂಗಿ ಬಂಡಿಯಮ್ಮ ಕಾಪಾಡುತ್ತಾರೆ ಎಂಬ ನಂಬಿಕೆ ಹಿರಿಯರಲ್ಲಿತ್ತು ಎಂಬುದನ್ನು ಗ್ರಾಮಸ್ಥರು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಕಾಫಿ, ಕಾಳುಮೆಣಸು ಕೃಷಿಯಲ್ಲಿ ರೈತರು ಯಶಕಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಚನ್ನಿಗರಾಯ ಸ್ವಾಮಿಯ ಅನುಗ್ರಹ ಎಂದು ರೈತರು ನಂಬಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ ನಂತರವೇ ಕೃಷಿ ಚಟುವಟಿಕೆ ಪ್ರಾರಂಭಿಸುತ್ತಾರೆ. ಸಮಯಕ್ಕೆ ಸರಿಯಾಗಿ ಮಳೆ ಬೀಳುತ್ತಿರುವುದರಿಂದ ಫಸಲು ಕೈಸೇರುತ್ತದೆ ಎಂಬ ನಂಬಿಕೆ ಕೃಷಿಕರದ್ದು.
ಮದುವೆ, ಸಂತಾನ ಭಾಗ್ಯ ಕರುಣಿಸುವ ಶಕ್ತಿ ಅಣ್ಣ, ತಂಗಿಗೆ ಇದೆ ಎಂಬ ನಂಬಿಕೆ ಜನರಲ್ಲಿದೆ. ಕಾಲಕ್ಕೆ ಸರಿಯಾಗಿ ಮಳೆ ಬೀಳುವುದು ಹಾಗೂ ಉತ್ತಮ ಕೃಷಿ ಫಸಲು ಕೈಸೇರುವುದು ದೇವರ ಅಗೋಚರ ಶಕ್ತಿಯಿಂದ ಎಂದು ಗ್ರಾಮಸ್ಥರಾದ ಎಂ.ಪಿ.ಜಯಕುಮಾರ್ ಹೇಳುತ್ತಾರೆ.
ಯಡವಾರೆ ಗ್ರಾಮದಲ್ಲಿ 30 ಕುಟುಂಬಗಳಿದ್ದು ಕೃಷಿಕರಾಗಿದ್ದಾರೆ. ಗ್ರಾಮದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೂ ದೇವರ ಸನ್ನಿಧಿಯಲ್ಲಿ ಪೂಜೆ ನಡೆಸಿ, ಆಶೀರ್ವಾದ ಪಡೆದ ನಂತರವೇ ಶುಭಕಾರ್ಯ ಮಾಡುತ್ತಾರೆ. ಪ್ರತಿವರ್ಷ ವಾರ್ಷಿಕ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಡಿಸೆಂಬರ್‌ನಲ್ಲಿ ಪುತ್ತರಿ ಪೂಜೆ, ಸತ್ಯನಾರಾಯಣ ಪೂಜೆ, ಏಪ್ರಿಲ್‌ನಲ್ಲಿ ವಾರ್ಷಿಕ ಪೂಜೆ ನಡೆಯುತ್ತದೆ.
ಬಂಡಿಯಮ್ಮ ವನದೇವತೆ: ಶ್ರೀ ಚನ್ನಿಗರಾಯ ದೇವಾಲಯದಿಂದ 400 ಮೀಟರ್ ದೂರದಲ್ಲಿ ಬಂಡಿಯಮ್ಮ ದೇವಿಯ ದೇವಾಲಯವಿದೆ. ಚನ್ನಿಗರಾಯ ಸ್ವಾಮಿಯ ತಂಗಿ ಎಂದೇ ಭಕ್ತರ ನಂಬಿಕೆಯಾಗಿದೆ. ಚನ್ನಿಗರಾಯ ಸ್ವಾಮಿಯ ವಾರ್ಷಿಕ ಪೂಜೆ ಕಳೆದು ಎರಡು ವಾರದಲ್ಲಿ ಬಂಡಿಯಮ್ಮನಿಗೂ ಪೂಜೆ ನಡೆಯುತ್ತದೆ. ದೇವಾಲಯಕ್ಕೆ 500 ವರ್ಷಗಳ ಇತಿಹಾಸವಿದ್ದರೂ 110 ವರ್ಷಗಳಿಂದ ಪೂಜೆ ಮಾಡಲಾಗುತ್ತಿದೆ. ಮೂಲೆಮಜುಲು ಪೊನ್ನಪ್ಪ ಅವರು ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ಶಕ್ತಿ ದೇವತೆಯೆಂದೆ ಹೆಸರುವಾಸಿಯಾಗಿರುವ ಬಂಡಿಯಮ್ಮ ಕೇಳಿದನ್ನು ದಯಾಪಾಲಿಸುವ ಅರಾಧ್ಯದೈವವಾಗಿದ್ದಾರೆ. ವಾರ್ಷಿಕವಾಗಿ ವಿಶೇಷ ಪೂಜೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಪ್ರಾರ್ಥನೆ, ಸಹಭೋಜನ ನಡೆಯುತ್ತದೆ.