ಶ್ರೀ ಚನ್ನಕೇಶವಸ್ವಾಮಿ ದೇಗುಲ ಸಮಸ್ಯೆ ಭಾಗಶಃ ನಿವಾರಣೆ

18blrp1
ಶ್ರೀ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮೂರು ವರ್ಷದ ಅವಧಿ ಪೂರೈಸಿದ ಡಾ.ನಾರಾಯಣಸ್ವಾಮಿ ಅವರನ್ನು ಗಣ್ಯರು ಅಭಿನಂದಿಸಿದರು.
Published on

ಬೇಲೂರು: ಶ್ರೀ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾದ ನಂತರ ಎಲ್ಲರ ಸಹಕಾರದೊಂದಿಗೆ ಹಲವಾರು ಸಮಸ್ಯೆಗಳನ್ನು ನಿವಾರಿಸಿ ಸಾಧ್ಯವಾದಷ್ಟು ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಶ್ರೀ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಹೇಳಿದರು.

ಶ್ರೀ ಚನ್ನಕೇಶವಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದ ಹಿನ್ನೆಲೆಯಲ್ಲಿ ದಾಸೋಹ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ದೇಗುಲದಲ್ಲಿ ನಮ್ಮ ಸಮಿತಿ ಆಡಳಿತಕ್ಕೆ ಬಂದ ನಂತರ ಹಲವು ಸಮಸ್ಯೆಗಳನ್ನು ನಿವಾರಿಸಿ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದೇವೆ. 25 ವರ್ಷಗಳಿಂದ ಇದ್ದ ವಾಹನಗಳ ಪಾರ್ಕಿಂಗ್ ಸಮಸ್ಯೆ ನಿವಾರಿಸಿದ್ದೇವೆ. ಪಾರ್ಕಿಂಗ್ ಶುಲ್ಕ ವಸೂಲಿ ಸಂಬಂಧ ಗೊಂದಲ ಇತ್ತು. ಅದೂ ಈಗ ನಿವಾರಣೆಯಾಗಿದೆ. ಒತ್ತುವರಿಯಾಗಿದ್ದ ದೇವಾಲಯದ ಜಾಗವನ್ನು ಬಿಡಿಸಿದ್ದೇವೆ. ಮಧಘಟ್ಟ ಸಮೀಪ ದೇವಾಲಯಕ್ಕೆ ಸೇರಿದ 5 ಎಕರೆ ಜಾಗ ಬಿಡಿಸಿ ಫೆನ್ಸ್ ಹಾಕಿಸಿದ್ದೇವೆ. ನಮ್ಮ ಅವಧಿಯಲ್ಲಿ ಮೂರು ರಥೋತ್ಸವಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಪ್ರಮುಖವಾಗಿ ಮಧ್ಯಾಹ್ನ ಮಾತ್ರ ಇದ್ದ ದಾಸೋಹವನ್ನು ಭಕ್ತರ ಅನುಕೂಲಕ್ಕಾಗಿ ರಾತ್ರಿ ಸಮಯಕ್ಕೂ ವಿಸ್ತರಣೆ ಮಾಡಿರುವುದು ಸಮಾಧಾನ ತಂದಿದೆ. ಪ್ರವಾಸಿಗರು, ಭಕ್ತರಿಗೆ ಮೂಲಸೌಲಭ್ಯ ಕಲ್ಪಸಿದ್ದೇವೆ. ಈ ಎಲ್ಲ ಕೆಲಸ ಮಾಡಲು ಹಿಂದಿನ ಹಾಗೂ ಈಗಿನ ಇಒ ಉತ್ತಮ ಸಹಕಾರ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಡ್ಡೆಗಾರರು, ಪಟೇಲರು, ಅರ್ಚಕರು, ದಾಸೋಹ ಭವನ-ದೇಗುಲದ ಸಿಬ್ಬಂದಿ ಸಹಕಾರ ಮರೆಯುವ ಆಗಿಲ್ಲ. ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಇಲ್ಲಿನ ಮಾಹಿತಿಯನ್ನು ಪತ್ರಿಕೆಗಳ ಮೂಲಕ ಬಿತ್ತರಿಸಿದ ಪತ್ರಕರ್ತರ ಸಹಕಾರ ತುಂಬಾ ಇತ್ತು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಮಾನವ ಹಕ್ಕು ಆಯೋಗದ ಜಿಲ್ಲಾಧ್ಯಕ್ಷ ನಿಂಗರಾಜು ಮಾತನಾಡಿ, ಡಾ.ನಾರಾಯಣಸ್ವಾಮಿ ಆವರು ಶ್ರೀ ಚನ್ನಕೇಶವಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ್ದದ್ದಾರೆ. ಇದಕ್ಕೆ ರಥೋತ್ಸವ, ದೇವರ ಉತ್ಸವ, ಅಭಿವೃದ್ಧಿ ಕೆಲಸಗಳು ಯಶಸ್ವಿಯಾಗಿ ನಡೆದಿರುವುದೇ ಸಾಕ್ಷಿ. ಇವರು ವೈದ್ಯರಾಗಿ ಜನರ ಸೇವೆಯಲ್ಲಿ ಹೇಗೆ ಕೆಲಸ ಮಾಡಿದ್ದಾರೂ ಹಾಗೆಯೇ ದೇವರ ಸೇವೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರವೇ(ಪ್ರವೀಣ್‌ಶೆಟ್ಟಿ)ಬಣದ ತಾಲೂಕು ಅಧ್ಯಕ್ಷ ಭೋಜೇಹೌಡ ಮಾತನಾಡಿ, ವಿಶ್ವ ಪಾರಂಪರಿಕ ಪಟ್ಟಿಗೆ ಬೇಲೂರು ದೇವಾಲಯ ಸೇರಿರುವುದರಿಂದ ದೇಗುಲದ ಸುತ್ತಮುತ್ತಲಿನ 100 ಮೀಟರ್ ಅಂತರದಲ್ಲಿ ಮನೆಗಳನ್ನು ತೆರವುಗೊಳಿಸಲಾಗುತ್ತದೆ ಎನ್ನುತ್ತಾರೆ. ಆದರೆ ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಇಲ್ಲಿ ಇನ್ನೂ ಸಣ್ಣಪುಟ್ಟ ಸಮಸ್ಯೆಗಳಿದ್ದು, ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಅವಧಿಗೆ ಬರುವರು ಇನ್ನುಳಿದಿರುವ ಕೆಲಸಗಳನ್ನು ಮಾಡುವ ಮೂಲಕ ದೇವಾಲಯದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಎಂದು ಆಶಿಸಿದರು.

ಸಮಿತಿ ಸದಸ್ಯರಾದ ರವಿಶಂಕರ್, ಪ್ರಮೋದ್, ಇಒ ಯೋಗೇಶ್, ಕರವೇ(ನಾರಾಯಣಗೌಡ)ಬಣದ ಅಧ್ಯಕ್ಷ ಚಂದ್ರಶೇಖರ್, ಖಾಸಿಂ, ಲಕ್ಷ್ಮೀನಾರಾಯಣ, ನೀಲಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net