

ಬೆಟ್ಟದಪುರ: ಇಲ್ಲಿಗೆ ಸಮೀಪದ ಚಪ್ಪರದಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ದೇವಿಯ ಜನ್ಮದಿನ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಬೆಳಗ್ಗೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಇಲ್ಲಿನ ಮೊಗೆ(ದೊಡ್ಡ)ಕೆರೆಯ ಬಳಿ ಗಂಗಾಪೂಜೆ ನೆರವೇರಿಸಿ, ಬಳಿಕ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ಪಲ್ಲಕ್ಕಿಯ ಮೇಲೆ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು. ನಂತರ ಮೂಲ ಸ್ಥಾನವಾದ ದೇವಸ್ಥಾನಕ್ಕೆ ಉತ್ಸವ ಮೂರ್ತಿಯನ್ನು ಸಂಪ್ರದಾಯದಂತೆ ಕರೆತರಲಾಯಿತು. ಬಳಿಕ ದೇವಸ್ಥಾನದಲ್ಲಿ ಅರ್ಚಕ ಮಂಜು ಆರಾಧ್ಯ ತಂಡದವರಿಂದ ಹೋಮ-ಹವನಗಳು, ಅಭಿಷೇಕಗಳು ಹಾಗೂ ವಿಶೇಷ ಪೂಜೆಗಳು ಭಕ್ತರ ಸಮ್ಮುಖದಲ್ಲಿ ಜರುಗಿತು. ಇದೇ ವೇಳೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ತಾಯಿಯ ಬಳಿ ಬೇಡಿಕೊಂಡರು. ನಂತರ ಬಂದಂತಹ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಉತ್ಸವದಲ್ಲಿ ದೇವಸ್ಥಾನದ ಪುರೋಹಿತ ಅಣ್ಣೇಗೌಡ, ಹನುಮಂತ, ಪಟೇಲ್ ಕಾಳೇಗೌಡ, ಯಜಮಾನ್ ಕಾಳೇಗೌಡ, ನಿಂಗೇಗೌಡ, ಸಿ.ಕಾಳೇಗೌಡ, ವಸಂತ, ಸಮಿತಿಯ ಅಧ್ಯಕ್ಷ ಸಿ.ಕೆ ವೆಂಕಟೇಶ್, ಖಜಾಂಚಿ ಅರುಣ, ಕಾರ್ಯದರ್ಶಿ ಸಿ.ಅಶ್ವತ್ಥ್‌ಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಇದ್ದರು.