

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ನಮ್ಮೊಳಗಿನ ಅಧ್ಯಾತ್ಮ ಮೌಲ್ಯಗಳು ಜಾಗೃತವಾಗಿ, ಜಗತ್ತಿನ ಧರ್ಮಕ್ಕೆ ಶಕ್ತಿ ನೀಡಲು ಇನ್ನಷ್ಟು ಬಲಿಷ್ಠರಾಗಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವುದರಿಂದ ಅಭ್ಯುದಯ ಉಂಟಾಗುತ್ತದೆ. ಧರ್ಮ ರಕ್ಷಣೆಗೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಬದುಕು ಸಾಗಿಸಬೇಕು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಮ್ಮ ಪಟ್ಟಾಭಿಷೇಕದ 16ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ, ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಮಂಗಳವಾರ ಆಶೀರ್ವಚನ ನೀಡಿದರು.
ಸಂಸ್ಕಾರ, ಮೌಲ್ಯ ಪಸರಿಸುವ ಅಗತ್ಯವಿದ್ದು ಮುಂದಿನ ಜನಾಂಗಕ್ಕೆ ಧರ್ಮ ಪ್ರಚಾರ ಮಾಡುವ ಜವಾಬ್ದಾರಿ ಎಲ್ಲರಿಗಿದೆ. ಜಾತಿ, ರಾಜಕೀಯ ಸಮಸ್ಯೆ ದೂರ ಮಾಡಿ ನಮ್ಮತನವನ್ನು ಸೃಷ್ಟಿಸಿ ಲೋಕಕಲ್ಯಾಣ ಕಾರ್ಯ ಮಾಡಬೇಕು. ದ್ವೇಷ, ಅಸೂಯೆ, ಸಂಶಯ, ಸಿಟ್ಟು ಬಿಟ್ಟಾಗ ಆನಂದ ಸಿಗುತ್ತದೆ. ಸ್ವಾರ್ಥದಿಂದ ಭೇದ-ಭಾವ ಉಂಟಾಗುತ್ತದೆ ಎಂದರು.
ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶಕ್ಕೆ ಸಂತರು ಅನಿವಾರ್ಯ. ದೇವರು, ಗುರುಗಳು ಒಲಿಯಲು ಭಕ್ತಿಯೇ ಮಾರ್ಗ ಎಂದರು.
ಅಯೋಧ್ಯೆಯ ಕೇಶವದಾಸ್ ಮಹಾರಾಜ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಭಟ್ಕಳ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಶ್ರೀರಾಮ ಕ್ಷೇತ್ರ ಸಮಿತಿ ತಾಲೂಕು ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಹೊನ್ನಾವರ ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ ನಾಯ್ಕ ಮಂಕಿ, ಭಟ್ಕಳ ಅರಸಕೇರಿ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅರುಣ್ ನಾಯ್ಕ, ಶಾರದಾಹೊಳೆ ನಾಮಧಾರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಕೆ.ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ಕುಮಟ ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಆರ್.ಜಿ.ನಾಯ್ಕ, ಮಂಗಳೂರು ಕಾರ್ಪೊರೇಟರ್ ಕಿರಣ್ ಕುಮಾರ್, ಬೇಬಿ ಕುಂದರ್ ಬಂಟ್ವಾಳ, ಸಂಜೀವ ಪೂಜಾರಿ ಮೊದಲಾವರು ಉಪಸ್ಥಿತರಿದ್ದರು.
ಮಠದ ಟ್ರಸ್ಟಿ ತುಕಾರಾಮ್ ಸಾಲಿಯಾನ್ ಸ್ವಾಗತಿಸಿದರು. ಶ್ರೀರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕೆಲ್ಲಡ್ಕ ನಿರೂಪಿಸಿದರು.
ನಮ್ಮೊಳಗೆ ವ್ಯತ್ಯಾಸವಾದಾಗ ಸರಿದಾರಿಗೆ ತರುವ ಕೆಲಸಗಳು ಮಠಗಳಿಂದ ನಡೆಯುತ್ತವೆ. ಸ್ವಾಮೀಜಿಗಳ ಉದ್ದೇಶ ಶಿಷ್ಯರ ಉನ್ನತಿ. ಇಲ್ಲಿನ ಗುರುಗಳ ಆಶಯದಂತೆ ಒಂಬತ್ತು ಶಾಖಾಮಠಗಳು ನಿರ್ಮಾಣವಾಗಲಿ. ಮುಂದಿನ ಚಾತುರ್ಮಾಸ್ಯವನ್ನು ಕೂಡ ಭಟ್ಕಳದಲ್ಲೇ ನಡೆಸಲು ಭಕ್ತರು ಆಶಯ ವ್ಯಕ್ತಪಡಿಸಿದ್ದಾರೆ. -ಮಂಕಾಳ ಎಸ್.ವೈದ್ಯ ಬಂದರು ಮತ್ತು ಮೀನುಗಾರಿಕೆ ಸಚಿವ ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ವಿಶಿಷ್ಟ ಸ್ಥಾನಮಾನ, ಮನ್ನಣೆ ಇದೆ. ಬದುಕಿನಲ್ಲಿ ಬೆಂದಿರುವ ಮಂದಿಗೆ ದಾರಿದೀಪವಾಗುವ ಶಕ್ತಿ ಗುರುವಿನಲ್ಲಿದೆ. ಗುರು ಭಕ್ತಿಯಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. - ಪ್ರತಾಪ ಸಿಂಹ ನಾಯಕ್, ವಿಧಾನಪರಿಷತ್ ಸದಸ್ಯ
ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ ನಡೆಯಿತು. ಸ್ವಾಮೀಜಿ ಪಾದಪೂಜೆ ನಡೆಯಿತು. ಈ ಬಾರಿಯ ಚಾತುರ್ಮಾಸ್ಯ ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರ ತನಕ ನಡೆದಿತ್ತು.