

ಜಗಳೂರು: ಆರೋಗ್ಯಕರ ಮಣ್ಣು ಕೃಷಿಯ ಭವಿಷ್ಯ, ಅದಕ್ಕಾಗಿಯೇ ನಾವು ಮಣ್ಣಿಗೆ ಆದ್ಯತೆ ನೀಡಬೇಕು ಮತ್ತು ಪುನರುತ್ಪಾದನೆಯತ್ತ ಹೆಜ್ಜೆ ಹಾಕಬೇಕು ಎಂದು ಶ್ರೀಬಯೋ ಅಸ್ಥೆಟಿಕ್ ಕಂಪನಿ ಸಿಇಒ ತಾರಕ್ ಧೂರ್ಜಟಿ ಹೇಳಿದರು.
ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ರೈತರ ಜಮೀನುಗಳಿಗೆ ಉಚಿತ ಮಣ್ಣು ಪರೀಕ್ಷೆ ಮತ್ತು ಮಣ್ಣು ಪ್ರಥಮ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಒಣ ಎಲೆ, ಗಿಡ ಮೂಲಿಕೆ, ಸಾವಯವ ಪದಾರ್ಥಗಳನ್ನು ಕೊಳೆಯುವಂತೆ ಮಾಡಿ, ಸಸ್ಯಗಳಿಗೆ ಅವಶ್ಯಕ ಪೋಷಕಾಂಶವಾದ ಹ್ಯೂಮಸ್ ಆಗಿ ಪರಿವರ್ತಿಸುತ್ತವೆ. ಇದರಿಂದ ಸಸ್ಯದ ಬೇರುಗಳು ಉತ್ತಮವಾಗಿ ಬೆಳೆಯುತ್ತವೆ. ಮಣ್ಣಿನಲ್ಲಿ ನೀರಿನ ಧಾರಣವು ಸುಧಾರಿಸುತ್ತದೆ. ಹಾನಿಕಾರಕ ಜೀವಿಗಳಿಂದ ರಕ್ಷಣೆ ಪಡೆಯುತ್ತವೆ ಎಂದರು.
ಕಂಪನಿಯ ಎಜಿಎಂ ವಿನಯ್ ಸ್ಕಂದ ಮಾತನಾಡಿ, ಬಿತ್ತನೆಗೆ ಮೊದಲು ಮಣ್ಣು ಪರೀಕ್ಷೆ ಮಾಡಿಸಿದರೆ ಅದರಲ್ಲಿನ ಅವಗುಣಗಳ ಆಧಾರದ ಮೇಲೆ ರಾಸಾಯನಿಕಗಳನ್ನು ಬಳಸಬಹುದು. ಇಲ್ಲವಾದರೆ ರಾಸಾಯನಿಕ ಸೇರಿ ಮಣ್ಣು ಸಂಪೂರ್ಣ ಹಾಳಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಕೆಚ್ಚೇನಹಳ್ಳಿ ಸಿದ್ದೇಶ್ ಮಾತನಾಡಿ, ಇಪ್ಪತ್ತೈದು ವರ್ಷಗಳ ಹಿಂದೆ ಸಗಣಿ ಗೊಬ್ಬರ ಬಳಸುತ್ತಿದ್ದರು. ಇದರಿಂದ ಪೋಷಕಾಂಶ ಲಭ್ಯವಾಗುತ್ತಿತ್ತು. ಸರ್ಕಾರಿ ಗೊಬ್ಬರದಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದರು.
ಕಂಪನಿಯ ವ್ಯವಸ್ಥಾಪಕ ರಾಮುಮದಲೆಟ್ಟಿ, ಚಿತ್ರದುರ್ಗ-ದಾವಣಗೆರೆ ಸಂಯೋಜಕ ಪುಟ್ಟಪ್ಪ, ಸಿಬ್ಬಂದಿ ಕೋಟಿರೆಡ್ಡಿ, ಹೇಮಂತ್, ಲೋಹಿತ್, ಅಜಯ್ ಸೇರಿ ಮತ್ತಿತರರಿದ್ದರು.