

ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿ ಜೀರ್ಣೋದ್ಧಾರಗೊಂಡಿರುವ ಐತಿಹಾಸಿಕ ಶ್ರೀ ಭೂಲಕ್ಷ್ಮೀವರಾಹಸ್ವಾಮಿ ದೇಗುಲದ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ದೊರೆಯಿತು.
2 ಶತಮಾನಗಳ ಹಿಂದೆ ದಿವಾನ್ ಪೂರ್ಣಯ್ಯ ಅವರ ಕಾಲದಲ್ಲಿ ನೂರಾರು ವರ್ಷಗಳ ಹಿಂದಿನ ಭೂಲಲಕ್ಷ್ಮೀ ಸಮೇತ ವರಾಹಸ್ವಾಮಿ ಮೂರ್ತಿಯನ್ನು ಮರು ಪ್ರತಿಷ್ಠಾಪಿಸಲಾಗಿತ್ತು. ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಸೇರಿದ ಈ ದೇಗುಲ ಶಿಥಿಲಗೊಂಡಿದ್ದರಿಂದ ಕೆಲವು ಸಾರ್ವಜನಿಕರ ಸಹಯೋಗದೊಂದಿಗೆ ಪಟ್ಟಣದ ಪ್ರಸಿದ್ಧ ವೈದ್ಯ ಕುಟುಂಬವಾಗಿರುವ ಡಾ. ರಮೇಶ್ ಉಡುಪ, ಡಾ. ಶಶಿಕಲಾ ರಮೇಶ್ ಅವರು ಜೀರ್ಣೋದ್ಧಾರಗೊಳಿಸಲು ಒಂದು ವರ್ಷದಿಂದಲೂ ಶ್ರಮ ವಹಿಸಿದ್ದರು. ಈಗ ಇದು ಪೂರ್ಣಗೊಂಡಿದ್ದು ವಿವಿಧ ಧಾರ್ಮಿಕ ಕಾರ್ಯಗಳಿಗೆ ಶನಿವಾರ ಚಾಲನೆ ನೀಡಲಾಯಿತು.
ಇಲ್ಲಿರುವ ಶ್ರೀ ಭೂಲಕ್ಷ್ಮೀ ವರಾಹಸ್ವಾಮಿ, ಶ್ರೀ ಚೆನ್ನಕೇಶವಸ್ವಾಮಿ, ಶ್ರೀ ಮಹಾಲಕ್ಷ್ಮೀ ಅಮ್ಮ, ಶ್ರೀ ಮೂಲೆ ಗಣಪತಿ, ವಿಮಾನಗೋಪುರಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಮಹಾ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕದ ಕಾರ್ಯಕ್ರಮದ ಪ್ರಥಮ ದಿನವಾದ ಶನಿವಾರ ಮಹಾಸಂಕಲ್ಪ, ಶುದ್ಧಿ ಪುಣ್ಯಾಹ, ವಾಸ್ತುಪೂಜೆ, ವಾಸ್ತುಹೋಮ, ಶಾಲಾಶುದ್ಧಿ, ನಿತ್ಯಹೋಮ, ಸದ್ಯಕಿ, ಚತುರ್ವೇದ ಪಾರಾಯಣೆ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇಗುಲದ ಆವರಣದಲ್ಲಿ ಇದಕ್ಕಾಗಿ ನಿರ್ಮಾಣಗೊಂಡಿರುವ ವಿಶೇಷ ಸ್ಥಳದಲ್ಲಿ ಆಯೋಜನೆ ಮಾಡಲಾಗಿತ್ತು. ಭಾನುವಾರ ಹಾಗೂ ಸೋಮವಾರವೂ ಈ ಕಾರ್ಯಕ್ರಮ ಜರುಗಲಿದೆ.