

ಶೃಂಗೇರಿ: ದಾರ್ಶನಿಕರಲ್ಲಿ ಶ್ರೀ ಆದಿಶಂಕರರು ಸರ್ವ ಶ್ರೇಷ್ಠರು. ಉಪನಿಷತ್ನಲ್ಲಿ ಹೇಳಲ್ಟಟ್ಟ ಉನ್ನತ ವಿಷಯಗಳನ್ನು ಸರ್ವರಿಗೂ ತಲುಪುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ತಿಳಿಸಿದರು.
ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದಡಿ ವೇದಾಂತ ಸಿದ್ಧಾಂತಕ್ಕೆ ರಾಜಮಾರ್ಗ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದರು.
ಭಾರತೀಯರಿಗೆ ವೇದಾಂತ ಕುರಿತು ಶ್ರದ್ಧೆ ಹಾಗೂ ಭಕ್ತಿ ಇದೆ. ವೇದದ ಕೊನೆಯ ಭಾಗಕ್ಕೆ ಉಪನಿಷತ್ತು ಎಂದು ಕರೆಯಲಾಗುತ್ತದೆ. ಉಪನಿಷತ್ತುಗಳಲ್ಲಿ ಬ್ರಹ್ಮತತ್ವ ಪ್ರತಿಪಾದನೆ ಮಾಡಲಾಗಿದೆ. ಈ ತತ್ವವನ್ನು ಅನುಭವಕ್ಕೆ ತಂದುಕೊಂಡರೆ ಮಾತ್ರ ಮೋಕ್ಷ ಪ್ರಾಪ್ತಿ ಎಂದು ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಮೋಕ್ಷ ಎಂದರೆ ಮತ್ತೆ ಜನ್ಮ ತಾಳದಿರುವುದು ಎಂದರ್ಥ. ಎಲ್ಲಿಯವರೆಗೆ ಹುಟ್ಟು-ಸಾವು ಇರುತ್ತದೆಯೋ ಅಲ್ಲಿಯವರೆಗೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಈ ಪರಂಪರೆಯಿಂದ ಮುಕ್ತಗೊಂಡರೆ ಮಾತ್ರ ನಿತ್ಯಸುಖ ಲಭ್ಯ. ಸಂಸಾರ ಸಾಗರ ದಾಟುವುದು ಎಲ್ಲರಿಗೂ ಬೇಕು. ಇದಕ್ಕೆ ಅಗತ್ಯವಾಗಿ ಬೇಕಾಗಿರುವುದು ವೇದಾಂತದಲ್ಲಿ ಹೇಳಿರುವ ಬ್ರಹ್ಮಜ್ಞಾನ ಮಾತ್ರ ಎಂದರು.
ಶ್ರೀ ಶಂಕರರು ಜನರಿಗೆ ಕರ್ಮವನ್ನು ಬಿಡು ಎಂದು ಎಲ್ಲೂ ತಿಳಿಸಿಲ್ಲ. ನಾವು ಮಾಡುವ ಕರ್ಮದಲ್ಲಿ ಲೋಪವಾಗಬಾರದು. ಶ್ರದ್ಧಾಭಕ್ತಿಯಿಂದ ಭಗವಂತನನ್ನು ಆರಾಧಿಸಿ ಬ್ರಹ್ಮಜ್ಞಾನ ಪಡೆಯಬೇಕು ಎಂದಿದ್ದಾರೆ ಎಂದು ಹೇಳಿದರು.