ಶ್ರೀ ಭದ್ರಕಾಳಮ್ಮ, ವೀರಭದ್ರಸ್ವಾಮಿ ರಥೋತ್ಸವ

2
ದೇವರಹೊಸಹಳ್ಳಿಯಲ್ಲಿ ಶ್ರೀಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಜನಸಾಗರ.
Published on

ದೇವರಹೊಸಹಳ್ಳಿ ಜಾತ್ರೆಯಲ್ಲಿ ಲಕ್ಷಾಂತರ ಜನ ಭಾಗಿ - ಸೂರುಬಾಳೆ, ಮೆಣಸು ತೂರಿ ಹರಕೆ ತೀರಿಸಿದ ಭಕ್ತರು

ದಾಬಸ್‌ಪೇಟೆ: ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ದೇವರಹೊಸಹಳ್ಳಿಯಲ್ಲಿ ಶ್ರೀ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಸುಮಾರು 1.50 ಲಕ್ಷ ಜನ ಜಾತ್ರೆಯಲ್ಲಿ ಸಮಾಗಮಗೊಂಡಿದ್ದರು. ಮುಂಜಾನೆಯಿಂದ ಶತರುದ್ರಭೀಷೇಕ ಹೋಮ ನಡೆದವು. ಮೂಲಾ ನಕ್ಷತ್ರ ಮಧ್ಯಾಹ್ನ 1 ರಿಂದ 1.30 ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ತಹಸೀಲ್ದಾರ್ ಅಮೃತ್ ಅತ್ರೇಶ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ಬೃಂದಾ, ಅಗಳಕುಪ್ಪೆ ಗ್ರಾಪಂ ಅಧ್ಯಕ್ಷೆ ಶೋಭಾಗಂಗರಾಜು ನೇತೃತ್ವದಲ್ಲಿ ರಥಕ್ಕೆ ಚಾಲನೆ ನೀಡಲಾಯಿತು.

ಜನ ರಥಕ್ಕೆ ಸೂರುಬಾಳೆ ಹಾಗೂ ಮೆಣಸು ತೂರಿ ಹರಕೆ ತೀರಿಸಿದರು. ಸಾಕಷ್ಟು ಜನ ನೆಲದಲ್ಲಿ ಬಿದ್ದಿದ್ದ ಮೆಣಸು ಆಯ್ದುಕೊಳ್ಳುತ್ತಿರುವುದು ಕಂಡು ಬಂತು. ಚರ್ಮ ರೋಗ ಬಂದರೆ ಮೆಣಸು ಅರೆದು ಹಚ್ಚಿದರೆ ಕಾಯಿಲೆ ವಾಸಿಯಾಗುತ್ತದೆ ಹಾಗೂ ಕೆಮ್ಮು, ಕಫ ಬಂದರೆ ಮೆಣಸು ಪುಡಿ ಮಾಡಿ ಹಾಲಲ್ಲಿ ಹಾಕಿ ಕುಡಿದರೆ ವಾಸಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ರಥಕ್ಕೆ ತೂರಿದ ಮೆಣಸು ಆಯ್ದುಕೊಳ್ಳುವುದು ಇಲ್ಲಿನ ರೂಢಿಯಾಗಿದೆ. ನಾದಸ್ವರ ತಾಳವಾದ್ಯದೊಂದಿಗೆ 15ಕ್ಕೂ ಹೆಚ್ಚು ಜನ ವೀರಗಾಸೆ ನೃತ್ಯದೊಂದಿಗೆ ರಥೋತ್ಸವಕ್ಕೆ ಮೆರುಗು ತಂದರು. 150ಕ್ಕೂ ಹೆಚ್ಚು ಅರವಟ್ಟಿಗೆಗಳಲ್ಲಿ ಪ್ರಸಾದ, ಮಜ್ಜಿಗೆ, ಪಾನಕ, ಹೆಸರುಬೇಳೆ ವಿತರಿಸಿದ್ದು, ಬಿಸಿಲಲ್ಲಿ ಜನ ದಣಿವಾರಿಸಿಕೊಂಡರು. 67ಕ್ಕೂ ಹೆಚ್ಚು ಕೊಪ್ಪಲುಗಳಲ್ಲಿ ಅನ್ನದಾಸೋಹ, ಅದರಲ್ಲೂ ಪಾಯಸ, ಕೆಲವು ಕೊಪ್ಪಲುಗಳಲ್ಲಿ ಮುದ್ದೆ, ಕೊತ್ತಲಸಿನಕಾಯಿ ಸಾಂಬಾರು ಬಡಿಸಲಾಯಿತು. ಉಪತಹಸೀಲ್ದಾರ್ ಬಿ.ಸಿ.ಶಶಿಧರ, ರಾಜಸ್ವ ನಿರೀಕ್ಷಕ ಮುನಿರಾಜು, ಆರ್‌ಐ ಸುಂದರ್‌ರಾಜ್, ಗ್ರಾಪಂ ಸದಸ್ಯರಾದ ಡಿ.ಜೆ.ಸತೀಶ್, ವನಿತಾ, ಡಿ.ಟಿ.ವೆಂಕಟಾಚಲಯ್ಯ, ದೇವಸ್ಥಾನದ ಪ್ರಧಾನ ಅರ್ಚಕ ಡಿ.ಜೆ.ಜಗಜ್ಯೋತಿ ಬಸವೇಶ್ವರ, ಆಗಮಿಕರಾದ ಣಿಭೂಷಣ್, ಪಾರುಪತ್ತೇದಾರ ಕೆ.ಬಿ.ಪ್ರಭುದೇವ, ಗ್ರಾಮಲೆಕ್ಕಿಗ ರೋಹಿತ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net