

ಹುಬ್ಬಳ್ಳಿ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜಕೀಯ ವ್ಯಕ್ತಿ ಹಾಗೂ ಪಕ್ಷದ ಪರವಾಗಿ ಹೇಳಿಕೆ ಕೊಡುವುದು ಸರಿಯಲ್ಲ. ಬಸನಗೌಡ ಪಾಟೀಲ ಯತ್ನಾಳ ಪರ ಯಾವುದೇ ರೀತಿಯ ಹೋರಾಟ ಮಾಡಬಾರದು. ಒಂದು ವೇಳೆ ಮಾಡಿದ್ದೇ ಆದಲ್ಲಿ, ಸಮಾಜದ ಹಿರಿಯ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಅಸಮಾಧನ ಹೊರಹಾಕಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಹೇಳಿಕೆಯಿಂದ ಸಮಾಜದವರಿಗೆ ಬೇಸರವಾಗಿದೆ. ಸ್ವಾಮೀಜಿಗಳಿಗೆ ಸಮಾಜ ಅನಿವಾರ್ಯ. ಅವರು ಜಾತಿ, ಒಳಪಂಗಡಗಳಿಗಾಗಿ ಕೆಲಸ ಮಾಡಬೇಕು. ಸ್ವಾಮೀಜಿಗಳನ್ನು ನೇಮಿಸುವ ಉದ್ದೇಶ ಸಮಾಜ ಸಂಘಟನೆಗಾಗಿ. ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕು ಎಂದರು.
ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡುವ ವಿಚಾರವಾಗಿ ಕಾನೂನು ತಜ್ಞರ ಸಮಿತಿ ರಚಿಸುತ್ತೇವೆ. ಅವರು ವರದಿ ಕೊಟ್ಟ ನಂತರ ಮುಂದಿನ ಹೆಜ್ಜೆ ಇಡುತ್ತೇವೆ. 2 ತಿಂಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಸೂಚಿಸುತ್ತೇವೆ ಎಂದರು.
ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಮಾತನಾಡಿ, ಯಾವ ಸಂದರ್ಭದಲ್ಲಾದರೂ ಸರಿ ಸ್ವಾಮೀಜಿಗಳು ವ್ಯಕ್ತಿ, ರಾಜಕೀಯ ಪಕ್ಷದ ಸ್ವತ್ತಾಗಬಾರದು. ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬಾರದು. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದರಿಂದ ರಾಜಕೀಯ ಸ್ವಾಮಿ ಆಗುತ್ತಾರೆ. ಹಾಗಾಗಬಾರದು ಎನ್ನುವ ಉದ್ದೇಶ ನಮ್ಮದು. ಸಮಾಜಕ್ಕೆ ಮಾಜಿ ಸಚಿವ ಮುರಗೇಶ ನಿರಾಣಿ ಅವರಂಥವರು ಮಾಡಿದ ಸಹಾಯ ನಾವು ಮರೆಯಲು ಆಗುವುದಿಲ್ಲ. ಪಕ್ಷಾತೀತವಾಗಿ ಎಲ್ಲ ಮುಖಂಡರ ಸಭೆ ಕರೆದು, ಸ್ವಾಮೀಜಿಗಳಿಗೆ ಯಾವ ನಿಟ್ಟಿನಲ್ಲಿ ಸಮಾಜವನ್ನು ಕರೆದುಕೊಂಡು ಹೋಗಬೇಕು ಎನ್ನುವುದರ ಕುರಿತು ಸಭೆ ಮಾಡಿ ಚರ್ಚಿಸುತ್ತೇವೆ. ಶಾಸಕರು, ಮಾಜಿ ಶಾಸಕರು, ಮಂತ್ರಿ, ಮಾಜಿ ಮಂತ್ರಿಗಳನ್ನು ಕರೆದು ಟ್ರಸ್ಟ್ ಅಡಿಯಲ್ಲಿ ಚಿಂತನಾ ಸಭೆ ಮಾಡುತ್ತೇವೆ ಎಂದರು.
ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹುಣಸೀಕಟ್ಟಿ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ವಿಶ್ವನಾಥ ಪಾಟೀಲ, ಎಂ.ಎಸ್. ಅಕ್ಕಿ, ಸೋಮಣ್ಣ ಬೇವಿನಮರದ, ಪ್ರಮುಖರಾದ ಎಲ್.ಎಂ. ಪಾಟೀಲ, ಜಿ.ಜಿ. ದ್ಯಾವನಗೌಡ್ರ, ಬಾಪೂಗೌಡ ಪಾಟೀಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು.