

ವಿರಾಜಪೇಟೆ: ಕಾನನ ವಾಸ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ಪಾಮಿಯ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಜರುಗಿತು.
ಶ್ರೀ ಸ್ವಾಮಿ ಅಯ್ಯಪ್ಪ ಭಜನಾ ಮಂದಿರ ಆರ್ಜಿ ಗ್ರಾಮ ಪೆರುಂಬಾಡಿ ವಿರಾಜಪೇಟೆ ವತಿಯಿಂದ 29ನೇ ವರ್ಷದ ಮಂಡಲ ಪೂಜಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಅರಂಭವಾದ ಮಂಡಲ ಪೂಜಾ ಮಹೋತ್ಸವವು ಶ್ರೀ ಅಯ್ಯಪ್ಪನ ಭಜನೆ ನಡೆಯಿತು. ಮಧ್ಯಾಹ್ನ ಸ್ವಾಮಿಗೆ ಮಾಹಾ ಪೂಜೆ ಸಲ್ಲಿಕೆಯಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ 7-30 ಕ್ಕೆ ಭಜನಮಂದಿರಲ್ಲಿ ದೀಪಾರಾಧನೆ ನಡೆಯಿತು.
ಶ್ರೀ ಸ್ವಾಮಿಯ ಭಾವಚಿತ್ರವಿರಿಸಿದ ಪಲ್ಲಕ್ಕಿಯೊಂದಿಗೆ ಅಯ್ಯಪ್ಪ ಮಾಲಾಧಾರಿಗಳು ಭಜನ ಮಂದಿರದಿಂದ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ದೀಪ ಹೊತ್ತು ಮೆರವಣಿಗೆಗೆ ಮೆರುಗು ನೀಡಿದರು.
ಶ್ರೀ ಅಯ್ಯಪ್ಪ ಸ್ವಾಮಿ ಬೇಟೆಗೆ ಹೊರಡುವ ವಿರಾಟ್ ರೂಪದ ಸ್ತಬ್ಧಚಿತ್ರವು ವಿದ್ಯುತ್ ಅಲಂಕೃತ ಮಂಟಪದಲ್ಲಿ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಯಿತು. ಕೇರಳದ ಚಂಡೆ ಮೇಳ ಮೆರವಣಿಗೆಗೆ ಸಾಥ್ ನೀಡಿತು. ಶೋಭಾಯಾತ್ರೆಯು ಭಜನಾ ಮಂದಿರದಿಂದ ಹೊರಟು ಪೊಲೀಸ್ ತಪಾಸಣೆ ಕೇಂದ್ರದ ಬಳಿಯ ಜಂಕ್ಷನ್‌ವರೆಗೆ ತೆರಳಿ ಹಿಂತಿರುಗಿ ಬಳಿಕ ಬಾಳೂಗೋಡು ಚಾಮಂಡಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಭಜನ ಮಂದಿರಯಲ್ಲಿ ಕೊನೆಗೊಂಡಿತು. ತುಂತುರು ಮಳೆ ನಡುವೆಯೂ ಶೋಭಾಯಾತ್ರೆ ನಡೆಯಿತು.
ಆಡಳಿತ ಮಂಡಳಿ, ದಾನಿಗಳಿಂದ ಬಿರುಸಿನ ಸಿಡಿಮದ್ದು ಪ್ರದರ್ಶನ ನಡೆಯಿತು. ಭಜನಾ ಮಂದಿರದಲ್ಲಿ ಗುರುಸ್ವಾಮಿ ಅವರ ನೇತ್ರತ್ವದಲ್ಲಿ ಪಡಿಪೂಜೆ ನಡೆಯಿತು. ಮಾಹಾ ಪೂಜೆ ಸಲ್ಲಿಸಲಾಗಿ ಪ್ರಸಾದ ವಿನಿಯೋಗ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಶಿವಪ್ಪ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಪೆರುಂಬಾಡಿ, ಆರ್ಜಿ ಗ್ರಾಮ ಬಾಳೂಗೋಡು ಬಿಟ್ಟಂಗಾಲ ಸೇರಿದಂತೆ ನಗರದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ತೀರ್ಥ, ಪ್ರಸಾದ ಸ್ವೀಕರಿಸಿದರು.