

ಶ್ರೀರಂಗಪಟ್ಟಣ : ಸಾಂಕ್ರಾಮಿಕ ರೋಗ ತಡೆಗೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.
ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಶುಕ್ರವಾರ ರಾಮಮಂದಿರ ಚಾವಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ತಾಲೂಕು ಆರೋಗ್ಯ ಇಲಾಖೆ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಲೇರಿಯಾ ಜಾಗೃತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ.ಹೇಮಣ್ಣ ಮಾತನಾಡಿ, ಕೆರೆ, ಕಟ್ಟೆ, ಬಾವಿ, ಕಲ್ಯಾಣಿ, ಕ್ವಾರೆ ಗುಂಡಿಗಳಲ್ಲಿ ಅನಾಫಿಲಿಸ್ ಸೊಳ್ಳೆ ಉತ್ಪತ್ತಿಯಾಗುತ್ತವೆ. ಈ ಸೊಳ್ಳೆ ನಿಯಂತ್ರಣಕ್ಕಾಗಿ ಜೈವಿಕ ವಿಧಾನದಲ್ಲಿ ಗಪ್ಪಿ ಮತ್ತು ಗ್ಯಾಂಬುಸಿಯಾ ಮೀನು ಮರಿಗಳನ್ನು ಬಿಡಲಾಗುತ್ತಿದೆ ಎಂದರು.
ಸಾರ್ವಜನಿಕರು ಸ್ವಯಂ ರಕ್ಷಣಾ ವಿಧಾನಗಳಾದ ಸ್ವಚ್ಛತೆ ನಿರ್ವಹಣೆ ,ಸೊಳ್ಳೆಪರದೆ ಉಪಯೋಗಿಸುವುದು, ಹಸಿ ಬೇವಿನ ಸೊಪ್ಪಿನ ಹೊಗೆ ಹಾಕುವುದು ಮುಂತಾದ ಕ್ರಮಗಳನ್ನು ಅನುಸರಿಸುವುದರ ಮೂಲಕ ಸೊಳ್ಳೆ ಉತ್ಪತ್ತಿ ತಡೆಗಟ್ಟಬೇಕೆಂದು ಅವರು ತಿಳಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ.ಚಂದನ್ ಅವರು ರೋಗ ತಡೆ ಪ್ರತಿಜ್ಞಾವಿಧಿ ಬೋಧಿಸಿದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಾಗೃತಿ ಜಾಥಾ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ, ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ಜಯರಾಮೇಗೌಡ, ಪುರುಷೋತ್ತಮ್, ಶಶಿಧರ್, ರವಿ, ಕಾರ್ಯದರ್ಶಿ ಕೃಷ್ಣ, ಆಯುಷ್ ವೈದ್ಯೆ ಡಾ. ನೂರ್ ವಸಿಮಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಫಣೀಂದ್ರ, ಮೇಘನಾ, ಸಮುದಾಯ ಆರೋಗ್ಯಾಧಿಕಾರಿ ಸಹನಾ, ಕಾವೇರಿ, ವಿಶ್ವನಾಥ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.