ಬಾಚಹಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

HUN-JAN-28-1(BACHAHALLI JATRE)
ಹುಣಸೂರು ತಾಲೂಕು ಬಾಚಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವರ 72ನೇ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
Published on

ಹುಣಸೂರು: ಸಮೀಪದ ಬಾಚಹಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವರ 72ನೇ ವರ್ಷದ ಬ್ರಹ್ಮರಥೋತ್ಸವ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಬಳಿಯಿರುವ ಬಾಚಹಳ್ಳಿಯಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಆಂಜನೇಯಸ್ವಾಮಿಯ ಎರಡು ದಿನಗಳ ಜಾತ್ರಾ ಮಹೋತ್ಸವ ಬ್ರಹ್ಮರಥೋತ್ಸವದೊಂದಿಗೆ ಆರಂಭವಾಯಿತು. ರಥೋತ್ಸವ ಅಂಗವಾಗಿ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ ಅರ್ಚಕ ಈಶ್ವರ್ ನೇತೃತ್ವದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬೆಳಗ್ಗಿನಿಂದಲೇ ಭಕ್ತರು ದೇವರ ದರ್ಶನ ಪಡೆದರು.
ದೇವಸ್ಥಾನದಿಂದ ಉತ್ಸವಮೂರ್ತಿಯನ್ನು ಹೊರತಂದು ವಿವಿಧ ಪೂಜಾ ಕೈಂಕರ್ಯ ನೆರವೇರಿಸಿ, ಮಧ್ಯಾಹ್ನ 1 ಗಂಟೆಗೆ ಹೂವಿನಿಂದ ಆಕರ್ಷಕವಾಗಿ ಅಲಂಕಾರಗೊಂಡ ರಥದಲ್ಲಿರಿಸಿ ಪೂಜೆ ನೆರವೇರಿಸಿದ ನಂತರ ಭಕ್ತರು ರಥ ಎಳೆದರು. ಜೈಶ್ರೀರಾಮ್, ಜೈ ಹನುಮಾನ್, ಭಲೇ ಭಜರಂಗಿ ಮುಂತಾದ ಘೋಷಣೆಗಳನ್ನು ಮೊಳಗಿಸಿ ಯುವಸಮೂಹ ಸಂಭ್ರಮಿಸಿತು. ದೇವಾಲಯದ ಸುತ್ತ ಪ್ರದಕ್ಷಿಣೆ ನಂತರ ರಥ ಸುರಕ್ಷಿತವಾಗಿ ಸ್ವಸ್ಥಾನ ತಲುಪಿತು.


ಜಾನುವಾರು ಜಾತ್ರೆ: ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಜಾತ್ರಾಮಾಳದಲ್ಲಿ 100ಕ್ಕೂ ಹೆಚ್ಚು ವಿವಿಧ ಜಾತಿಯ ರಾಸುಗಳನ್ನು ರೈತರು ತಂದಿದ್ದರು. ಜಾನುವಾರುಗಳ ಮಾರಾಟವೂ ಜೋರಾಗಿಯೇ ನಡೆಯಿತು. ಆಂಜನೇಯಸ್ವಾಮಿಯ ಜಾತ್ರೆಯಲ್ಲಿ ಕಡ್ಲೆಪುರಿ ವ್ಯಾಪಾರ ಭರಾಟೆ ಕಂಡು ಬಂತು. ಮಹಿಳೆಯರು ಮಕ್ಕಳೊಂದಿಗೆ ಆಟಿಕೆ ಮತ್ತು ಕಡ್ಲೆಪುರಿ ಖರೀದಿಸಿದರು. ಹುಣಸೂರಿನ ಆಂಜನೇಯಸ್ವಾಮಿ ಮಿತ್ರಬಳಗದ ವತಿಯಿಂದ 10 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ದೇವಾಲಯ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಟ್ರಸ್ಟಿಗಳಾದ ಎಚ್.ಜಿ.ನಾರಾಯಣ, ಉಮೇಶ್, ಹೇಮಲತಾ ಇತರರು ಭಾಗವಹಿಸಿದ್ದರು. ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಜ.29ರಂದು ಬೆಳಗ್ಗೆ 10ಗಂಟೆಗೆ ತೆಪ್ಪೋತ್ಸವ ಜರುಗಲಿದ್ದು, ಇದರೊಂದಿಗೆ ಜಾತ್ರಾ ಮಹೋತ್ಸವ ಸಮಾಪ್ತಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net