ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠ ಉದ್ಘಾಟನೆ ಸೆ.10, 11ಕ್ಕೆ

Nirmalanandanatha swamiji vvani
Published on

ಮೈಸೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಹೆಬ್ಬಾಳು ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ, ಬಿಜಿಎಸ್ ಸಾಂಸ್ಕೃತಿಕ ಭವನ, ಉಚಿತ ವಿದ್ಯಾರ್ಥಿನಿಲಯದ ಉದ್ಘಾಟನಾ ಕಾರ್ಯಕ್ರಮವನ್ನು ಸೆ.10, 11 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಸೆ.10 ರಂದು ಸಂಜೆ 7ಕ್ಕೆ ಹಮ್ಮಿಕೊಂಡಿರುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್, ಶಾಸಕ ಕೆ.ಹರೀಶ್‌ಗೌಡ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.11ರಂದು ಬೆಳಗ್ಗೆ 11ಕ್ಕೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿದಾನಂದಾಜೀ, ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂಸ್ವಾಮೀಜಿ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಸಮಾರಂಭ ಏರ್ಪಡಿಸಲಾಗಿದೆ. ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಬಿಜಿಎಸ್ ಸಾಂಸ್ಕೃತಿಕ ಭವನವನ್ನು ಶಾಸಕ ಎಚ್.ಡಿ.ರೇವಣ್ಣ, ಉಚಿತ ವಿದ್ಯಾರ್ಥಿನಿಲಯ ಕಟ್ಟಡವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜಿಎಸ್ ಅತಿಥಿಗೃಹ ಕಟ್ಟಡವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗೋರಕ್ಷನಾಥರ ‘ಸಿದ್ಧಸಿದ್ಧಾಂತ ಪದ್ಧತಿ’ ಗ್ರಂಥವನ್ನು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ‘ತತ್ವದರ್ಶನ’ ಗ್ರಂಥವನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಸಾಹುಕಾರ್ ಚೆನ್ನಯ್ಯ ಗ್ರಂಥವನ್ನು ಶಾಸಕ ಜಿ.ಟಿ.ದೇವೇಗೌಡ, ರಾಮೇಗೌಡ ಗ್ರಂಥವನ್ನು ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡಲಿದ್ದಾರೆ. ಅತಿಥಿಗಳಾಗಿ ಸಂಸದ ವಿ. ಶ್ರೀನಿವಾಸಪ್ರಸಾದ್,ಮಹಾಪೌರ ಶಿವಕುಮಾರ್, ಶಾಸಕರಾದ ತನ್ವೀರ್ ಸೇಠ್, ಟಿ.ಎಸ್. ಶ್ರೀವತ್ಸ, ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಜಿ.ಡಿ.ಹರೀಶ್ ಗೌಡ, ರಮೇಶ್ ಬಾಬುಬಂಡೀಸಿದ್ದೇಗೌಡ, ದರ್ಶನ್ ಧ್ರುವನಾರಾಯಣ, ದರ್ಶನ್ ಪುಟ್ಟಣ್ಣಯ್ಯ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ವಿವರ:
ಸೆ.10ರ ಬೆಳಗ್ಗೆ 6ಕ್ಕೆ ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದಿಂದ ಶ್ರೀಕಾಲಭೈರವೇಶ್ವರನ ಭೈರವ ಜ್ಯೋತಿ ಹೊರಟು ನಾಗಮಂಗಲ, ಮೇಲುಕೋಟೆ ವೃತ್ತ, ಪಾಂಡವಪುರ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರು ಪ್ರವೇಶಿಸಲಿದೆ. ಜಾನಪದ ಕಲಾ ತಂಡಗಳೊಂದಿಗೆ ನಗರದ ಎಲ್ಲ ಸಂಸ್ಥೆಗಳ ಸದಸ್ಯರು ಭೈರವ ಜ್ಯೋತಿಯನ್ನು ಬರಮಾಡಿಕೊಳ್ಳಲಿದ್ದಾರೆ. ಬಳಿಕ ಭೈರವ ಜ್ಯೋತಿಯು ನಗರದ ಎಲ್ಲ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಶ್ರೀ ಲಕ್ಷ್ಮೀಕಾಂತ ದೇವಸ್ಥಾನಕ್ಕೆ ಸಾಧುಸಂತರೊಡನೆ ಪ್ರವೇಶ ಮಾಡಲಿದೆ ಎಂದು ಹೇಳಿದರು.

ಬೆಳಗ್ಗೆ 8ಕ್ಕೆ ಮಂಗಳವಾದ್ಯ, ಗುರುಗಣಪತಿ ಪ್ರಾರ್ಥನೆ, ಶ್ರೀ ಲಕ್ಷ್ಮೀಕಾಂತಸ್ವಾಮಿಯ ಆನುಜ್ಞೆಯೊಂದಿಗೆ ಮಹಾಮಂಗಳಾರತಿ, ತೀರ್ಥಸಂಗ್ರಹಣ, ಯಾಗಶಾಲಾಪ್ರವೇಶ, ಕಾಲಭೈರವೇಶ್ವರ ಹಾಗೂ ಪರಿವಾರ ದೇವತೆಗಳ ಹೋಮಗಳು, ಮಹಾಪೂರ್ಣಾಹುತಿ, ಅಷ್ಟಾವಧಾನ ಸೇವೆ ನಡೆಯಲಿದೆ. ಸಂಜೆ 5ಕ್ಕೆ ಗಣಪತಿಪೂಜೆ, ಅಂಕುರಾರ್ಪಣೆ, ಶ್ರೀಗುರುಗಳ ಆಗಮನ, ಯಾಗಶಾಲಾ ಪ್ರವೇಶ, ಅಧ್ಯಾಯ ಹೋಮ, ಗಜಪೂಜೆ, ಅಶ್ವಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.11ರಂದು ಬೆಳಗ್ಗೆ 6ಕ್ಕೆ ಸಪ್ತಶತಿ ನಾರಾಯಣ, ಮಹಾಗಣಪತಿ ಪೂಜೆ, ಸಂಕಲ್ಪ, ವೇದಿಕಾರ್ಚನೆ, ಅಗ್ನಿಕಾರ್ಯ, ನವಚಂಡಿಕಾ ಮಹಾಯಾಗ ಅಧ್ಯಾಯಹೋಮ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net