

ಮೈಸೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘದ ಜಿಲ್ಲಾ ಸಮಿತಿಯಿಂದ ಸಮಾಜ ಸೇವಾ ಕಾರ್ಯದ ಮೂಲಕ ಮಂಗಳವಾರ ಶ್ರೀ ಶಿವಾನಂದಪುರಿ ಸ್ವಾಮೀಜಿ ಅವರ ಜನ್ಮದಿನ ಆಚರಿಸಲಾಯಿತು.
ಸಿದ್ಧಿವಿನಾಯಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್‌ಬುಕ್, ಪೆನ್ನು ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಮಾತನಾಡಿ, ಶ್ರೀ ಶಿವಾನಂದಪುರಿ ಸ್ವಾಮೀಜಿ ಅವರು ಧಾರ್ಮಿಕ ಆಚರಣೆಗಳ ಜತೆಗೆ ಸಾಮಾಜಿಕ ಕೊಡುಗೆ ನೀಡುವ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳು ಶಿಕ್ಷಣ ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಆದ್ದರಿಂದ ಪಾಲಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಮನವಿ ಮಾಡಿದರು.
ಶ್ರೀ ಅರುಣ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಉಪ ಮೇಯರ್ ಮಹಾದೇವಮ್ಮ, ಮೈಸೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜು, ಮುಖಂಡರಾದ ಪುಟ್ಟಸ್ವಾಮಿ, ಮಹಾದೇವಮ್ಮ, ಜಯ ಎಂ.ಎನ್.ಚೇತನ್‌ಗೌಡ, ಕಾಂಜೀಗೌಡ, ಪುನೀತ್, ರಾಯಣ್ಣ, ಮುಖ್ಯ ಶಿಕ್ಷಕರಾದ ಅಂಬುಜ, ಹರ್ಷ, ಚೈತ್ರಾ, ಅಂಗನವಾಡಿ ಶಿಕ್ಷಕಿ ಸುಜಾತಾ ಇತರರು ಇದ್ದರು.