

ಬೆಳಗಾವಿ:ಸೆಣಸಲೆಂದೆ ಸಜ್ಜುಗೊಂಡ ಬಲಿಷ್ಠ ಟಗರುಗಳ ರಭಸದ ಟಕ್ಕರ್‌ನಿಂದ ಹೊರಡುತ್ತಿದ್ದ ಶಬ್ಧ ನೆರೆದ ಅಪಾರ ಜನರಲ್ಲಿ ರೋಮಾಂಚನ ಮೂಡಿಸುವ ಮೂಲಕ ಕಾಳಗದ ಅಖಾಡ ರಣಕೇಕೆಯ ರಂಗು ಪಡೆದುಕೊಳ್ಳುತ್ತಿತ್ತು. ಜನರಿಗೆ ಬಾರಿ ಮನರಂಜನೆ ಸಿಕ್ಕಿತ್ತು.
ಇದು ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮಾರುತೇಶ್ವರ ಓಕುಳಿ ಅಂಗವಾಗಿ ಭಾನುವಾರ ಟಗರಿನ ಕಾಳಗ ಹಮ್ಮಿಕೊಳ್ಳಲಾಗಿತ್ತು.
ನಾಲ್ಕು ಹಲ್ಲು, ಎಂಟು ಹಲ್ಲು ಟಗರುಗಳನ್ನು ವಿಂಗಡಿಸಿ ನಡೆದ ಈ ಸ್ಪರ್ಧೆಯಲ್ಲಿ ಟಗರುಗಳ ಸೆಣಸಾಟ ನೆರೆದಿದ್ದವರಲ್ಲಿ ರೋಮಾಂಚನ ಸೃಷ್ಟಿಸಿತು. ಬಲಿಷ್ಠ ಟಗರುಗಳ ಪರಸ್ಪರ ಟಕ್ಕರ್ ವಿಚಿತ್ರ ಶಬ್ದ ಹೊಮ್ಮಿಸುತ್ತಿತ್ತು. ನೆರೆದ ಜನ ಘೋಷಣೆಗಳನ್ನು ಹಾಕಿ ಹುರಿದುಂಬಿಸಿದರು. ಟಗರುಗಳನ್ನು ಸ್ಪರ್ಧೆಗೆ ಬಿಡುತ್ತಿದ್ದಂತೆ ಕಾಲು ಕೆರೆದು ವೇಗವಾಗಿ ಓಡಿಬಂದು ಎದುರಿನ ಟಗರಿಗೆ ಗುದ್ದಿ ಮೊದಲ ಟಕ್ಕರಿನಲ್ಲೆಯ ಪ್ರತಿಸ್ಪರ್ಧಿಯ ಶಕ್ತಿ ಸಾಮರ್ಥ್ಯ ಅಳೆಯುವಂತೆ ಭಾಸವಾಗುತ್ತಿತ್ತು. ನಂತರದ ಟಕ್ಕರ್‌ಗೆ ಬಲಿಷ್ಠ ಟಗರು ಹೂಂಕರಿಸುತ್ತಿದ್ದರೆ, ಕಡಿಮೆ ಶಕ್ತಿಯ ಟಗರು ಹಿಂಜರಿಯುತ್ತಿತ್ತು. ಹೀಗೆ ನಾಲ್ಕೈದು ಗುದ್ದಾಟಗಳಲ್ಲಿ ವಿಜಯದ ಟಗರು ಯಾವುದೆಂಬುದು ಘೋಷಣೆಯಾಗುತ್ತಿತ್ತು.