'ವಸಂತ ಶಿಬಿರ' ಬೇಸಿಗೆ ಶಿಬಿರದ ಸಮಾರೋಪ

Overturned bus in Jodupala
Published on

ಮಡಿಕೇರಿ:

ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯ ಸಮೀಪವಿರುವ ಮಧುಕೃಪದ ಆವರಣದಲ್ಲಿ ಬಾಲಗೋಕುಲ ಮಡಿಕೇರಿ ವತಿಯಿಂದ ವಸಂತ ಶಿಬಿರ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಕ್ಷೇತ್ರಗಳ ಹಲವಾರು ನುರಿತ ವ್ಯಕ್ತಿಗಳು ಮಕ್ಕಳಿಗೆ ಅಮೃತ ವಚನ, ಶ್ಲೋಕಗಳು, ಕಬೀರನ ದೋಹಗಳು, ಗಾದೆಗಳು, ಒಗಟುಗಳು, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆಗಳು, ಅಭಿನಯ ಗೀತೆಗಳು, ಮಹಾಪುರುಷರ ಕಥೆಗಳು, ದೇಶಿಯ ಆಟಗಳು, ಯೋಗಾಸನ, ಸಂಗೀತ, ಕ್ರಾಫ್ಟ್ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅದರೊಂದಿಗೆ ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಮಕ್ಕಳು ಆಟವಾಡಿ ಸಂಭ್ರಮಿಸಿದರು. ಶಿಬಿರದಲ್ಲಿ ಐದರಿಂದ ಹದಿನೈದನೆಯ ವಯಸ್ಸಿನ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

ಭಾನುವಾರ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಶಾರೀರಿಕ ಪ್ರಮುಖ್ ಡಾಲಿ, ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಇಂದಿನ ಮಕ್ಕಳು ಮುಂದಿನ ಸಮಾಜಕ್ಕೆ ಸತ್ಕಾರ್ಯಕ್ಕಾಗಿ ಸಿಗಬೇಕಾದರೆ ಬಾಲಗೋಕುಲ ಶಿಕ್ಷಣ ಅನಿವಾರ್ಯವಾಗಿದೆ. ನಮ್ಮ ಮಕ್ಕಳನ್ನು ವಿಶ್ವದ ಶ್ರೇಷ್ಠ ಕೊಡುಗೆಯಾಗಿ ರೂಪಿಸಲು ಬಾಲಗೋಕುಲದ ಶಿಕ್ಷಣದಿಂದ ಪ್ರೇರಣೆ ಲಭಿಸಲಿ ಎಂದರು.

ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಡಾ. ರೇಣುಶ್ರೀ ಮಾತನಾಡಿ ನೈತಿಕ ವೌಲ್ಯ ಕುಸಿಯುತ್ತಿರುವ ವರ್ತಮಾನ ಕಾಲದಲ್ಲಿ ಸಾಮಾಜಿಕ ಅಧಃಪತನ ಉಂಟಾಗುತ್ತಿದೆ. ಇದನ್ನು ತಡೆಯಲು ಮಾನವೀಯ ವೌಲ್ಯ ಬೆಳೆಸುವ ಸಾಂಸ್ಕೃತಿಕ ಶಿಕ್ಷಣವನ್ನು ಬೋಧಿಸುವ ವ್ಯವಸ್ಥೆಯ ಬಾಲಗೋಕುಲದಂತಹ ಸಂಸ್ಕಾರವನ್ನು ನೀಡುವ ಸಂಸ್ಥೆಗಳು, ಬಾಲ್ಯದಲ್ಲೇ ಮಕ್ಕಳಿಗೆ ಉತ್ತಮವಾದ ಜೀವನ ಮೌಲ್ಯಗಳನ್ನು ಕಲಿಸುವುದರಿಂದ ಮಕ್ಕಳು ಸತ್ಪಪ್ರಜೆಗಳಾಗಿ ರೂಪುಗೊಂಡು ನಮ್ಮ ರಾಷ್ಟ್ರದ ಉನ್ನತ್ತಿಗೆ ಜೊತೆಯಾಗುತ್ತಾರೆ ಎಂದರು.

ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಪೋಷಕರು ತಮ್ಮ ತಮ್ಮ ಮನೆಯಲ್ಲಿ ಆಹಾರವನ್ನು ಸಿದ್ದಪಡಿಸಿಕೊಂಡು ಬಂದು ಎಲ್ಲರೂ ಒಟ್ಟಾಗಿ ಮಾತೃಭೋಜನ ಸೇವಿಸುವ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net