

ಮೈಸೂರು: ದಸರಾ ಸಂದರ್ಭ ಗೊಂಬೆಗಳನ್ನು ಕೂರಿಸುವ ಪದ್ಧತಿ ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸ್ನೇಹ ಸಿಂಚನ ಟ್ರಸ್ಟ್ ಸಹಯೋಗದಲ್ಲಿ ವಿಜಯವಿಠಲ ವಿದ್ಯಾಶಾಲೆಯಲ್ಲಿ ಶುಕ್ರವಾರ ಅಯೋಜಿಸಿದ್ದ ಸಂಸ್ಕೃತಿ ಸಿಂಚನ ಪ್ರಶಸ್ತಿ ಪ್ರದಾನ, ಭಾವಯಾನ ಗೀತಾ ಗಾಯನ, ನವರಾತ್ರಿ ಗೊಂಬೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ದಸರಾ ಗೊಂಬೆ ಪ್ರದರ್ಶನಕ್ಕೆ ವಿಶೇಷ ಸ್ಥಾನಮಾನವಿದೆ. ಈ ಸಂದರ್ಭದಲ್ಲಿ ಗೊಂಬೆ ಪ್ರದರ್ಶನ ಯಾವ ಸನ್ನಿವೇಶದ್ದು ಎಂಬ ಕಥೆಗಳ ಮೂಲಕ ಅದರ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಮನೆಗಳಲ್ಲಿ ಆಯೋಜಿಸುವ ಗೊಂಬೆ ಪ್ರದರ್ಶನ ರಾಮಾಯಣ, ಮಹಾಭಾರತ ಅಥವಾ ಬೇರೆ ಯಾವುದೇ ಸನ್ನಿವೇಶವನ್ನೂ ಪ್ರಭಾವಶಾಲಿಯಾಗಿ ತಿಳಿಸಬಲ್ಲದು ಎಂದರು.
ವಿವಿಧ ಕ್ಷೇತ್ರದ ಸಾಧಕಿಯರಾದ ಸರಸ್ವತಿ ಶ್ರೀಮಂತರಾವ್, ಲಕ್ಷ್ಮೀ ಶಿವರಾಂ, ಇಂದ್ರಾಣಿ ಶಂಕರ, ಉಮಾ ನಂಜುಂಡಯ್ಯ, ಶ್ರೀಲತಾ ಹೆಗಡೆ ಅವರಿಗೆ ಸಂಸ್ಕೃತಿ ಸಿಂಚನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನವರಾತ್ರಿ ವೇಳೆ ಮನೆಗಳಲ್ಲಿ ಗೊಂಬೆ ಪ್ರದರ್ಶಿಸಿದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಿಪ್ರ ಮುಖಂಡ ಕೆ.ರಘುರಾಂ ವಾಜಪೇಯಿ ಮಾತನಾಡಿದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಮ.ನ.ಲತಾಮೋಹನ್, ಸಮಾಜ ಸೇವಕಿ ಸುಶೀಲಾ ಶ್ಯಾಮಸುಂದರ, ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಅಧ್ಯಕ್ಷ ಮಲೆಯೂರು ಪ್ರಭುಸ್ವಾಮಿ, ಕಾರ್ಯಕ್ರಮ ಆಯೋಜಕರಾದ ಪದ್ಮಾ ಪಾಡುವಂತೆ, ಕೌಸಲ್ಯಾ, ರೇವತಿ ರಾಮಸ್ವಾಮಿ ಇತರರು ಇದ್ದರು.
ಶ್ರೀ ಮಾತಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಜಯಚಾಮರಾಜೇಂದ್ರ ಒಡೆಯರ್ ರಚಿತ ಕಾಯೋ ಶ್ರೀ ಗೌರಿ ಗೀತೆ ಹಾಡಿದರು. ರಾಗ ಲಯ ಸಂಗೀತ ಕೇಂದ್ರದ ಹೇಮಲತಾ, ಉಮಾ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿದವು.