

ಬೆಂಗಳೂರು: ಚೂರಿ ತೋರಿಸಿ, ಬೆದರಿಸಿ, ಹಲ್ಲೆ ಮಾಡಿ ದರೋಡೆ ಮಾಡುವುದನ್ನು ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ದರೋಡೆಕೋರ ಮಹಿಳೆ ಮೇಲೆ ಪೆಟ್ರೋಲ್ ಸುರಿದು, ಕಿರುಚಿದರೆ ಬೆಂಕಿ ಹಚ್ಚುವುದಾಗಿ ಬೆದರಿಸಿ ಮಾಂಗಲ್ಯಸರ ಸೇರಿ 40 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾನೆ.
ಅಮೃತಹಳ್ಳಿ ಕಾಶಿನಗರ ರಸ್ತೆಯ ಆಶಾ ರಾಜ್ ಚಿನ್ನಾಭರಣ ಕಳೆದುಕೊಂಡವರು. ಜ.11ರ ಸಂಜೆ 7 ಗಂಟೆಗೆ ಆಶಾ ರಾಜ್ ಪುತ್ರಿಯೊಂದಿಗೆ ಮನೆಯಲ್ಲಿದ್ದರು. ತರಕಾರಿ ತರಲೆಂದು ಹೊರಹೋಗಲು ಮುಂಬಾಗಿಲನ್ನು ತೆರೆದಾಗ ಮನೆ ಮುಂದೆ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ. ಆತನನ್ನು ವಿಚಾರಿಸಬೇಕು ಎನ್ನುವಷ್ಟರಲ್ಲಿ ಆತ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್ ಅನ್ನು ಆಶಾ ರಾಜ್ ಮೈ ಮೇಲೆ ಎಸೆದಿದ್ದ. ಆತ ಎಸೆದಿದ್ದು ಏನೆಂದು ನೋಡುವಷ್ಟರಲ್ಲಿ ಆಶಾ ಅವರ ಮೈಮೇಲೆ ಪೆಟ್ರೋಲ್ ಚೆಲ್ಲಿರುವುದು ಗಮನಕ್ಕೆ ಬಂದಿತ್ತು.
ಇದರಿಂದ ಆತಂಕಗೊಂಡ ಆಶಾ ಯಾರು ನೀನು ಎಂದು ಆತನನ್ನು ಪ್ರಶ್ನಿಸಬೇಕು ಎನ್ನುವಷ್ಟರಲ್ಲಿ ಆರೋಪಿಯು ಮನೆಯೊಳಗೆ ಪ್ರವೇಶಿಸಿ ಮುಂಬಾಗಿಲನ್ನು ಹಾಕಿಕೊಂಡ. ಕೈಯಲ್ಲಿ ಬೆಂಕಿಪೊಟ್ಟಣ ಹಿಡಿದು ಯಾರಾದರೂ ಕೂಗಿದರೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಸಿದ. ನಂತರ ಮನೆಯಲ್ಲಿರುವ ಹಣ, ಚಿನ್ನಾಭರಣ ಕೊಡುವಂತೆ ಹೇಳಿದ. ಇದಕ್ಕೆ ಪ್ರತಿಕ್ರಿಯಿಸಿದ ಆಶಾ, ಮನೆಯಲ್ಲಿ ಅತ್ತಿಗೆಯ ತಿಥಿ ಕಾರ್ಯ ನಡೆಯಲಿದ್ದು, ಸದ್ಯ ಹಣವಿಲ್ಲ. ದಯವಿಟ್ಟು ಬಿಟ್ಟು ಬಿಡಿ ಎಂದು ಬೇಡಿಕೊಂಡರು.
ಚಿನ್ನಾಭರಣ ದೋಚಿದ: ಆಶಾ ಅವರ ಮಾತು ಒಪ್ಪದ ದುಷ್ಕರ್ವಿು, ಮೈಮೇಲಿರುವ ಚಿನ್ನದ ಸರ ಕೊಡುವಂತೆ ಬೆದರಿಸಿದ. ಆತಂಕಗೊಂಡ ಆಶಾ, ತಮ್ಮ ಕೊರಳಿನಲ್ಲಿದ್ದ ಚಿನ್ನದ ಸರ, ಎರಡು ಬಳೆ, ಒಂದು ಕಿವಿ ಓಲೆ ಸೇರಿ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ ಬಿಚ್ಚಿ ಅಪರಿಚಿತನ ಕೈಗಿತ್ತರು. ತಮ್ಮ ಯಜಮಾನರು ಇಲ್ಲೇ ಇದ್ದಾರೆ ಎಂದು ದುಷ್ಕರ್ವಿುಯನ್ನು ಹೆದರಿಸಲು ಪ್ರಯತ್ನಿಸಿದರು. ಇದರಿಂದ ಆಕ್ರೋಶಗೊಂಡ ದುಷ್ಕರ್ವಿು, ಕಿರುಚಿದರೆ ಬೆಂಕಿ ಹಚ್ಚಿ ಹತ್ಯೆ ಮಾಡುವುದಾಗಿ ಬೆದರಿಸಿ, ಓಡಿಹೋಗಿದ್ದಾನೆ. ಆತ ಹೋದ ಬಳಿಕ ಪತಿಗೆ ಕರೆ ಮಾಡಿದ ಆಶಾ ನಡೆದ ಸಂಗತಿ ವಿವರಿಸಿದ್ದಾರೆ. ತಕ್ಷಣವೇ ಮನೆಗೆ ಬಂದ ಪತಿ, ಆಶಾ ರಾಜ್ ಜತೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರಿಂದ ಶೋಧ
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆಶಾ ರಾಜ್ ಮನೆ ಸುತ್ತಮುತ್ತಲಿನ ರಸ್ತೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಪ್ರದೇಶದಲ್ಲಿ ಯಾವುದೇ ಸಿಸಿ ಕ್ಯಾಮರಾಗಳಿಲ್ಲ. ಇದನ್ನು ಅರಿತಿದ್ದ ಕಳ್ಳ ಸಂಚು ರೂಪಿಸಿ ಕೃತ್ಯ ಎಸಗಿದ್ದಾನೆ. ಈ ಹಿಂದೆ ಆತನನ್ನು ಎಂದೂ ಈ ಪ್ರದೇಶದಲ್ಲಿ ನೋಡಿಲ್ಲ ಎಂದು ಆಶಾ ಪೊಲೀಸರಿಗೆ ತಿಳಿಸಿದ್ದಾರೆ. ಆದರೂ ದುಷ್ಕರ್ವಿುಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.