ಬೆಳೆಗೆ ಶಕ್ತಿ ನೀಡಲು ಔಷಧ ಸಿಂಪಡಿಸಿ

Krushi
Published on

ಸವಣೂರ: ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ಅವುಗಳಿಗೆ ಶಕ್ತಿ ನೀಡಲು ಔಷಧ ಸಿಂಪಡಿಸಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಎಸ್.ಎಚ್. ಹರದಕಟ್ಟಿ ತಿಳಿಸಿದರು.

ತಾಲೂಕಿನ ನಂದಿಹಳ್ಳಿ ಗ್ರಾಮದ ಜಮೀನುಗಳಿಗೆ ಭಾನುವಾರ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿ ರೈತರಿಗೆ ಸಲಹೆ ನೀಡಿದರು.
ಅಧಿಕ ತೇವಾಂಶದಿಂದ ಬೆಳೆಗಳು ಕುಂಠಿತವಾಗುತ್ತಿವೆ. ಅದಕ್ಕೆ ರೈತರು ಹೆದರಬೇಕಿಲ್ಲ. ಗೋವಿನಜೋಳ ಬೆಳೆಗೆ ಕೇದಿಗೆ ರೋಗ ಹಾಗೂ ಲದ್ದಿಹುಳು ಕಾಟ, ಸೋಯಾಬೀನ್ ಬೆಳೆಗೆ ತುಕ್ಕು ರೋಗ ಕಂಡು ಬರುತ್ತಿದೆ. ಬೆಳೆ ಹಾಳಾಗಿದೆ ಎಂದು ಕಿತ್ತು ಹಾಕಬೇಡಿ. ರೋಗ ಹತೋಟಿಗೆ ಗೋವಿನಜೋಳ ಬೆಳೆಗೆ ನ್ಯಾನೋ ಯುರಿಯಾ, ಇಮಾಮೆಕ್ಟಿನ್ ಬೆಂಝೇಯೇಟ್, ಅಥವಾ ಇಮಾಮೇಕ್ಟಿನ್ ಬೆಂಝೇಯೇಟ್ ಹಾಗೂ ಥೈಯೋಮೇತಾಕ್ಸಾಮ್ ಔಷಧವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೊಲಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದರು.

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗುರುಪ್ರಸಾದ ಅವರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹತ್ತಿ ಬೆಳೆಗೆ ರಸ ಹೀರುವ ಕೀಟ ಬಾಧೆ ಹೆಚ್ಚಾಗಿದೆ. ಹತೋಟಿಗೆ ಥಯೋಮಿರಾಕ್ಸಾಮ್ ಅಥವಾ ಅಸಿಲಾಮಿಪ್ರಿಡ್ ಔಷಧವನ್ನು ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು ಎಂದರು.

ಕೃಷಿ ಇಲಾಖೆ ಎಡಿ ಸವಿತಾ ಚಕ್ರಸಾಲಿ, ಕೃಷಿ ಸಂಜೀವಿನಿಯ ಟೆಕ್ನಿಷಿಯನ್ ಅರುಣ ಪಾಟೀಲ, ಅನುವುಗಾರ ಪಿ.ಆರ್. ಕ್ಯಾಡದ, ರೈತರಾದ ಸೋಮನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ನಿಂಗಪ್ಪ ಅಣ್ಣಿಗೇರಿ, ಬಸನಗೌಡ ಪಾಟೀಲ, ಶ್ರೀಕಾಂತ ಇಂಗಳಗಿ, ಸೋಮಪ್ಪ ಕೊಪ್ಪದ, ರೇವಣಯ್ಯ ಹಿರೇಮಠ, ಪ್ರಮೋದ ಗುಡಗೇರಿ, ಗಣಪತಿ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net